ಜಿಬಿಎ ವ್ಯಾಪ್ತಿಯ ಆಸ್ತಿ ಖರೀದಿ-ಮಾರಾಟ ಎಲ್ಲವೂ ಆನ್ಲೈನ್
ರಸ್ತೆ ಅಭಿವೃದ್ಧಿಗೆ ಜಮೀನು ನೀಡಿದವರಿಗೆ ನೀಡುವ ಟಿಡಿಆರ್ ಪ್ರಮಾಣಪತ್ರಗಳ ಖರೀದಿ ಮತ್ತು ಮಾರಾಟಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ (GBA) ಅಧಿಕೃತ ಡಿಜಿಟಲ್ ವೇದಿಕೆ ರೂಪಿಸಲಾಗುತ್ತಿದೆ.
GBA-TDR-Portal, Onlin


ಬೆಂಗಳೂರು, 03 ನವೆಂಬರ್ (ಹಿ.ಸ.):

ರಸ್ತೆ ಅಗಲೀಕರಣ, ಹೊಸ ರಸ್ತೆ ನಿರ್ಮಾಣದಂತಹ ಅಭಿವೃದ್ಧಿ ಕೆಲಸಗಳಿಗೆ ಜಮೀನು ನೀಡಿದವರಿಗೆ ಸರ್ಕಾರ ನೀಡುವ ಟಿಡಿಆರ್ ಪ್ರಮಾಣಪತ್ರಗಳನ್ನು ಇನ್ನು ಮುಂದೆ ಆನ್ಲೈನ್ನಲ್ಲೇ ಕೊಂಡುಕೊಳ್ಳುವ ಹಾಗೂ ಮಾರುವ ವ್ಯವಸ್ಥೆ ಬರಲಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈ ನಿರ್ಧಾರ ಮಾಡಿದ್ದು, ನೋ ಬ್ರೋಕರ್ ಮಾದರಿಯಲ್ಲಿ ಸರ್ಕಾರವೇ ಅಧಿಕೃತ ಡಿಜಿಟಲ್ ವೇದಿಕೆ ಸಿದ್ಧಪಡಿಸುತ್ತಿದೆ.

ಈಗ ಸೂಕ್ತ ಮಾರುಕಟ್ಟೆ ಇಲ್ಲದೆ ನೂರಾರು ಕೋಟಿ ರೂಪಾಯಿ ಮೌಲ್ಯದ ಪ್ರಮಾಣಪತ್ರಗಳು ಬಾಕಿ ಉಳಿದು, ಭೂಮಾಲೀಕರು ಆರ್ಥಿಕ ಹಾಗೂ ಕಾನೂನು ಸಮಸ್ಯೆ ಎದುರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಮಂಜೂರಾತಿಯಿಂದ ಬಳಕೆಯವರೆಗಿನ ಎಲ್ಲ ಹಂತಗಳನ್ನು ಡಿಜಿಟಲ್ಗೆ ತರಲು ಸೂಚಿಸಿದ್ದಾರೆ.

ಕಾಗದದ ಕಡತಗಳಿಂದಾಗಿ ಪಾರದರ್ಶಕತೆ ಕೊರತೆ ಉಂಟಾಗಿ ಜನರ ನಂಬಿಕೆ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಅರ್ಜಿಯ ಸ್ಥಿತಿಯನ್ನು ಆನ್ಲೈನ್ನಲ್ಲೇ ಟ್ರ್ಯಾಕ್ ಮಾಡುವ ಸೌಲಭ್ಯವೂ ಸಿಗಲಿದೆ.

ಈ ಹೊಸ ವೇದಿಕೆಯಲ್ಲಿ ಮಾರಾಟಗಾರರು ಮತ್ತು ಖರೀದಿದಾರರು ನೇರವಾಗಿ ಸಂಪರ್ಕ ಸಾಧಿಸಬಹುದು. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ತಪ್ಪಿ ವಹಿವಾಟು ಪಾರದರ್ಶಕವಾಗಲಿದೆ.

ವಿಳಂಬ, ದಾಖಲೆಗಳ ಹೊರೆ ಮತ್ತು ಸಾರ್ವಜನಿಕರ ಕಿರುಕುಳ ಕಡಿಮೆಯಾಗಿ ಟಿಡಿಆರ್ ವ್ಯವಸ್ಥೆ ಮೇಲೆ ಮತ್ತೆ ವಿಶ್ವಾಸ ಮೂಡಲಿದೆ ಎಂದು ಸಚಿವರು ಆಶಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande