ಬೆಂಗಳೂರಿನಲ್ಲಿ ಅಕ್ರಮ ಪಿಜಿಗಳ ನಿಯಂತ್ರಣಕ್ಕೆ ಹೊಸ ಎಸ್ಒಪಿ ರೂಪಿಸಲು ಜಿಬಿಎ ಸಿದ್ಧತೆ
3,597 ಅನಧಿಕೃತ ಪಿಜಿಗಳ ಪತ್ತೆ; ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ನಾಗರಿಕ ಹೋರಾಟಗಾರರ ಒತ್ತಾಯ
Bengaluru-illegal-PGs-GBA-new-SOP-regulations-control-unauthorised-paying-guest-accommodations


ಬೆಂಗಳೂರು, 03 ನವೆಂಬರ್ (ಹಿ.ಸ.):

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ (ಪಿಜಿ) ನಿಲಯಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಟ್ಟಡ ನಿಯಮಗಳು, ಅಗ್ನಿ ಸುರಕ್ಷತೆ, ವಾಹನ ನಿಲುಗಡೆ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ವ್ಯಾಪಕವಾಗಿ ನಡೆಯುತ್ತಿರುವ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತನ್ನ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಸಾವಿರಕ್ಕೂ ಹೆಚ್ಚು ಪಿಜಿ ವಸತಿ ಕೇಂದ್ರಗಳನ್ನು ನಿಯಂತ್ರಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ರೂಪಿಸಲು ಮುಂದಾಗಿದೆ.

ಜಿಬಿಎ ನಡೆಸಿದ ಪರಿಶೀಲನೆಯಲ್ಲಿ ನಗರದಲ್ಲಿ 3,597 ಅನಧಿಕೃತ ಪಿಜಿಗಳು ಇರುವುದು ಪತ್ತೆಯಾಗಿದೆ. ಆದರೆ, ಹೊಸ ನಿಯಮಗಳ ಜಾರಿಗೆ ಸಿದ್ಧತೆ ನಡೆಯುತ್ತಿದ್ದರೂ, ಅಕ್ರಮ ಪಿಜಿಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಬಗ್ಗೆ ನಾಗರಿಕ ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್ ಸೂಚನೆ ಬಳಿಕ ಎಚ್ಚೆತ್ತ ಜಿಬಿಎ:

ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ಪಿಜಿ ನಿಯಮಗಳ ಉಲ್ಲಂಘನೆ ನಡೆಯುತ್ತಿದ್ದರೂ, ಜಿಬಿಎ ಈಗ ಕ್ರಮಕ್ಕೆ ಮುಂದಾಗಿರುವುದು ಹೈಕೋರ್ಟ್ ಪದೇಪದೇ ನೀಡಿದ ಕಠಿಣ ಸೂಚನೆಗಳ ಪರಿಣಾಮ ಎಂದು ಬೆಂಗಳೂರು ಕೊಯಲಿಷನ್ನ ರಾಜಗೋಪಾಲನ್ ಆರ್. ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಿಯಮ ಉಲ್ಲಂಘನೆಗಳ ವಿರುದ್ಧ ಈವರೆಗೆ ಯಾವುದೇ ಗಮನಾರ್ಹ ಕ್ರಮಗಳು ನಡೆದಿಲ್ಲ. ಪರಿಷ್ಕೃತ ನೀತಿ ಅಥವಾ ಎಸ್ಒಪಿ ರೂಪಿಸುವ ಪ್ರಸ್ತಾಪವಿದ್ದರೂ, 2024ರ ಮಾರ್ಗಸೂಚಿಗಳನ್ನು ಬಹಿರಂಗವಾಗಿಯೇ ಉಲ್ಲಂಘಿಸಲಾಗುತ್ತಿದೆ.

ವಸತಿ ಪ್ರದೇಶಗಳಲ್ಲಿ ಪಿಜಿಗಳ ಕಾರ್ಯಾಚರಣೆಯನ್ನು ನಿಯಂತ್ರಿಸಲು ವಲಯ ನಿಯಮಾವಳಿಗಳನ್ನು ತಿದ್ದುಪಡಿ ಮಾಡಬೇಕು. ಅಲ್ಲದೆ, ಹಾಸ್ಟೆಲ್ಗಳಿಗಿಂತ ಭಿನ್ನವಾಗಿ ಪಿಜಿಗಳಿಗೆ ಪ್ರತ್ಯೇಕ ವರ್ಗೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪಿಜಿಗಳ ಪರ ಮಾಲೀಕರ ವಾದ:

ಮತ್ತೊಂದೆಡೆ, ವಿದ್ಯಾಭ್ಯಾಸ ಮತ್ತು ಉದ್ಯೋಗದ ಅವಕಾಶಗಳನ್ನು ಅರಸಿ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಪಿಜಿಗಳು ಕಡಿಮೆ ವೆಚ್ಚದ ವಸತಿ ಸೌಲಭ್ಯ ಒದಗಿಸುತ್ತಿವೆ. ಹೀಗಾಗಿ ಪಿಜಿಗಳನ್ನು ನಿರ್ಬಂಧಿಸುವ ಬದಲು ಅವುಗಳ ಕಾರ್ಯಾಚರಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಪಿಜಿ ಮಾಲೀಕರ ಸಂಘದ ವಾದವಾಗಿದೆ.

ಆದರೆ, ಬೆಂಗಳೂರಿನ ನಾಗರಿಕರ ವೇದಿಕೆಯ ಸಂಚಾಲಕ ಸಂದೀಪ್ ಅನಿರುದ್ಧನ್ ಈ ವಾದವನ್ನು ಒಪ್ಪಿಲ್ಲ. ಅಕ್ರಮ ಪಿಜಿಗಳ ಹಾವಳಿ ಮತ್ತು ಕಟ್ಟಡ ನಿಯಮಗಳ ಉಲ್ಲಂಘನೆ ರಾಜ್ಯದ ಎರಡು ಮೂಲಭೂತ ವೈಫಲ್ಯಗಳಾದ ಯೋಜನಾರಹಿತ ಅಭಿವೃದ್ಧಿ ಹಾಗೂ ಕಾನೂನು ಸುವ್ಯವಸ್ಥೆಯ ಕುಸಿತದ ಪರಿಣಾಮವಾಗಿದೆ.

ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಉಳಿದ ಕ್ರಮಗಳೆಲ್ಲವೂ ಮೇಲ್ನೋಟದ ಬದಲಾವಣೆಗಳಾಗಲಿವೆ. ಬೆಂಗಳೂರು ವೇಗವಾಗಿ ಕೊಳಗೇರಿ ನಗರವಾಗಿ ಬದಲಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

ಅಕ್ರಮ ಕಟ್ಟಡಗಳು ಮತ್ತು ಬಡಾವಣೆಗಳನ್ನು ವಶಕ್ಕೆ ಪಡೆದು, ಕಾನೂನುಬದ್ಧವಾಗಿ ಮರುಅಭಿವೃದ್ಧಿಪಡಿಸಿ ಆಸ್ತಿಗಳನ್ನು ಮಾರಾಟ ಮಾಡುವ ಅಧಿಕಾರ ಹೊಂದಿರುವ ಸ್ವಾಯತ್ತ ಪ್ರಾಧಿಕಾರ ಸ್ಥಾಪಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇದರೊಂದಿಗೆ ಕಟ್ಟಡ ನಿರ್ಮಾಣ ಮತ್ತು ನೆಲಸಮ ಪ್ರಕ್ರಿಯೆಗಳನ್ನು ಒಳಗೊಂಡ ಮರುಬಳಕೆ ಆರ್ಥಿಕ ವ್ಯವಸ್ಥೆ ರೂಪಿಸಬೇಕು. ಆರ್ಥಿಕ ಪ್ರೋತ್ಸಾಹ, ಮೂಲಸೌಕರ್ಯ ನೆರವು ಹಾಗೂ ಭೂಮಿಯ ಲಭ್ಯತೆಯೊಂದಿಗೆ ವಿಶೇಷ ನವೋದ್ಯಮ ನೀತಿ ಜಾರಿಗೆ ತರಬೇಕು. ಆಯಕಟ್ಟಿನ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣ ಮತ್ತು ನೆಲಸಮದ ತ್ಯಾಜ್ಯ ಮರುಬಳಕೆ ಉದ್ಯಾನಗಳನ್ನು ಸ್ಥಾಪಿಸುವುದರಿಂದ ಹಸಿರು ಉದ್ಯಮಗಳ ಸೃಷ್ಟಿಗೂ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಭಾವಿಗಳಿಗೆ ರಕ್ಷಣಾ ಕವಚವಾಗಬಾರದು ಹೊಸ ನಿಯಮ:

ಬಿಎನ್ಪಿ ಸಂಸ್ಥಾಪಕ ಶ್ರೀಕಾಂತ್ ನರಸಿಂಹನ್ ಮಾತನಾಡಿ, ಪಿಜಿಗಳ ವ್ಯವಹಾರವು ಮಾಲೀಕರು ಮತ್ತು ರಾಜಕಾರಣಿಗಳ ನಡುವಿನ ಪ್ರಬಲ ನಂಟಿನೊಂದಿಗೆ ಬೆಳೆಯುತ್ತಿದೆ. ನಿಯಮಗಳನ್ನು ಪಾಲಿಸಲು ಬಯಸುವ ಸಣ್ಣ ಮಾಲೀಕರು ವ್ಯವಹಾರದಿಂದ ಹೊರಗುಳಿಯುವಂತಾಗಿದೆ. ಹಲವು ಸಂದರ್ಭಗಳಲ್ಲಿ ಹೊಸ ನಿಯಮಗಳು ಪ್ರಭಾವಿಗಳಿಗೆ ರಕ್ಷಣಾ ಕವಚವಾಗುತ್ತವೆ ಎಂದು ಆರೋಪಿಸಿದ್ದಾರೆ.

ಸರ್ಕಾರಕ್ಕೆ ಪಿಜಿ ಕಾರ್ಯಾಚರಣೆಯನ್ನು ವ್ಯವಸ್ಥಿತಗೊಳಿಸುವ ನಿಜವಾದ ಉದ್ದೇಶವಿದ್ದರೆ, ಎಸ್ಒಪಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಅದರಲ್ಲಿರುವ ಅಂಶಗಳನ್ನು ಜನರಿಗೆ ಸ್ಪಷ್ಟಪಡಿಸುವುದರ ಜತೆಗೆ ವ್ಯಾಪಕ ಸಾರ್ವಜನಿಕ ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಅಕ್ರಮ ಪಿಜಿಗಳ ನಿಯಂತ್ರಣಕ್ಕೆ ಐದು ಪ್ರಮುಖ ಸಲಹೆಗಳು:

ನಗರದಲ್ಲಿ ಹೆಚ್ಚುತ್ತಿರುವ ಪಿಜಿಗಳ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಹೊಣೆಗಾರಿಕೆ ಖಚಿತಪಡಿಸಲು ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ವಿಶೇಷ ಕಾರ್ಯಪಡೆ ರಚಿಸಬೇಕು. ಈಗಿರುವ ಕಾನೂನುಗಳನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

1. ವಲಯ ನಿಯಮಗಳ ಪಾಲನೆ: ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಜಿಗಳು ವಲಯ ನಿಯಮಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು.

2. ಕಟ್ಟಡ ನಿಯಮಗಳ ಅನುಸರಣೆ: ಅಗ್ನಿ ಸುರಕ್ಷತಾ ವ್ಯವಸ್ಥೆ, ವಾಹನ ನಿಲುಗಡೆ ಸೌಲಭ್ಯ ಹಾಗೂ ಅನುಮೋದಿತ ಕಟ್ಟಡ ನಕ್ಷೆಯ ಪ್ರಕಾರ ನಿರ್ಮಾಣವಾಗಿದೆಯೇ ಎಂಬುದನ್ನು ಖಚಿತಪಡಿಸಬೇಕು.

3. ಸುರಕ್ಷತೆಗೆ ಆದ್ಯತೆ: ಆಹಾರ ಸುರಕ್ಷತೆಗಾಗಿ ಎಫ್ಎಸ್ಎಸ್ಎಐ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿವಾಸಿಗಳ ವೈಯಕ್ತಿಕ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆಯ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ಪ್ರಕ್ರಿಯೆ ಜಾರಿಗೊಳಿಸಬೇಕು.

4. ವ್ಯಾಪಾರ ಪರವಾನಗಿ: 2024ರ ಬಿಬಿಎಂಪಿ ಪಿಜಿ ಮಾರ್ಗಸೂಚಿಗಳು ಹಾಗೂ ತಿದ್ದುಪಡಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅರ್ಹತಾ ಮಾನದಂಡಗಳನ್ನು ಪ್ರತಿ ವರ್ಷ ಪರಿಶೀಲಿಸಬೇಕು.

5. ಘನತ್ಯಾಜ್ಯ ನಿರ್ವಹಣೆ: ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವ ಘಟಕಗಳಿಗೆ ಅನ್ವಯಿಸುವ ನಿಯಮಗಳ ಅಡಿಯಲ್ಲಿ ಪಿಜಿಗಳನ್ನು ವರ್ಗೀಕರಿಸಿ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ಖಚಿತಪಡಿಸಬೇಕು.

ಒಟ್ಟಿನಲ್ಲಿ, ಬೆಂಗಳೂರಿನಲ್ಲಿ ಪಿಜಿಗಳ ಸಂಖ್ಯೆ ಹೆಚ್ಚುತ್ತಿರುವುದರ ಜತೆಗೆ ಅಕ್ರಮ ಕಾರ್ಯಾಚರಣೆಗಳೂ ಹೆಚ್ಚುತ್ತಿರುವುದು ನಗರಾಡಳಿತಕ್ಕೆ ಸವಾಲಾಗಿದೆ.

ಜಿಬಿಎ ರೂಪಿಸಲು ಉದ್ದೇಶಿಸಿರುವ ಹೊಸ ಎಸ್ಒಪಿ ಕೇವಲ ಕಾಗದದ ಮೇಲಿನ ನಿಯಮವಾಗಿ ಉಳಿಯದೆ, ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಬರಬೇಕಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande