
ಬೆಂಗಳೂರು, 03 ನವೆಂಬರ್ (ಹಿ.ಸ.):
ರೈತರಿಗೆ ನ್ಯಾಯಯುತ ಬೆಲೆ ನೀಡುವ ನಿಜವಾದ ಕಾಳಜಿ ಕಾಂಗ್ರೆಸ್ ಸರ್ಕಾರಕ್ಕಿದ್ದರೆ, ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ₹10 ಸಹಾಯಧನವನ್ನು ರಾಜ್ಯ ಸರ್ಕಾರವೇ ತನ್ನ ಬೊಕ್ಕಸದಿಂದ ನೀಡಲಿ ಎಂದು ಸಂಸದ ಡಾ.ಕೆ. ಸುಧಾಕರ್ ಸವಾಲು ಹಾಕಿದ್ದಾರೆ.
ರೈತರಿಗೆ ಹಾಲಿನ ಖರೀದಿ ದರ ಹೆಚ್ಚಿಸುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ ರೈತರ ಹೆಸರಿನಲ್ಲಿ ಹಾಲಿನ ದರ ಏರಿಕೆ ಮಾಡಿ ಬಡ ಮಕ್ಕಳು, ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೇರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರೈತರಿಗೆ ನ್ಯಾಯಯುತ ಬೆಲೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಹಾಲಿನ ಖರೀದಿ ದರವನ್ನು ₹7ರ ಬದಲಿಗೆ ₹10 ಹೆಚ್ಚಿಸಿದರೂ ತಮ್ಮ ಆಕ್ಷೇಪವಿಲ್ಲ. ಆದರೆ ಈ ಹೆಚ್ಚುವರಿ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡುವ ಬದಲು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತರಿಗೆ ಹೆಚ್ಚಿನ ಬೆಲೆ ನೀಡುವ ನಿಜವಾದ ಕಾಳಜಿ ಸರ್ಕಾರಕ್ಕಿದ್ದರೆ ರಾಜ್ಯದ ಬೊಕ್ಕಸದಿಂದಲೇ ಪ್ರತಿ ಲೀಟರ್ ಹಾಲಿಗೆ ₹10 ಸಹಾಯಧನ ನೀಡಲಿ.
ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯುವುದರ ಜತೆಗೆ ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಹಾಲು ಸಿಗಲಿದೆ. ರೈತರು ಮತ್ತು ಗ್ರಾಹಕರಿಬ್ಬರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಹಾಲಿನ ದರ ಏರಿಕೆಯಿಂದ ಬಡ ಕುಟುಂಬಗಳು, ಹಾಲನ್ನೇ ಅವಲಂಬಿಸಿರುವ ಮಕ್ಕಳು, ಕೂಲಿ ಕಾರ್ಮಿಕರು ಹಾಗೂ ಸಣ್ಣ ಕಾಫಿ, ಟೀ ಅಂಗಡಿ ಮಾಲೀಕರಿಗೆ ತೊಂದರೆಯಾಗಲಿದೆ.
ಹೀಗಾಗಿ ರೈತರಿಗೆ ಹೆಚ್ಚಿನ ಬೆಲೆ ನೀಡುವ ನಿರ್ಧಾರದ ಸಂಪೂರ್ಣ ಹೊರೆ ಗ್ರಾಹಕರ ಮೇಲೆ ಹಾಕುವುದು ಸಮಂಜಸವಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಹೇಳಿಕೆಗಳನ್ನು ತಿರುಚಿ ವೈಯಕ್ತಿಕವಾಗಿ ಟೀಕೆ ಮಾಡುತ್ತಿರುವ ಚಿಮುಲ್ ಅಧ್ಯಕ್ಷರ ವಿರುದ್ಧವೂ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಚಿಮುಲ್ ಅಧ್ಯಕ್ಷರು ಮೊದಲು ರೈತರ ಹಿತಾಸಕ್ತಿಯ ಬಗ್ಗೆ ತಮ್ಮ ಬದ್ಧತೆಯನ್ನು ತೋರಿಸಲಿ.
ಮುಖ್ಯಮಂತ್ರಿ ಹಾಗೂ ಚಿಮುಲ್ ಅಧ್ಯಕ್ಷರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಹೆಚ್ಚುವರಿ ಸಹಾಯಧನದ ಹೊಣೆಯನ್ನು ಸರ್ಕಾರವೇ ಹೊರಲು ಸಿದ್ಧವಿದೆಯೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ರೈತರಿಗೆ ನ್ಯಾಯಯುತ ಆದಾಯ ದೊರೆಯಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಹಾಲು ಜನಸಾಮಾನ್ಯರ ದೈನಂದಿನ ಅಗತ್ಯವಾಗಿರುವುದರಿಂದ ಅದರ ಬೆಲೆಯೂ ಕೈಗೆಟುಕುವಂತಿರಬೇಕು.
ಈ ಎರಡೂ ಜವಾಬ್ದಾರಿಗಳನ್ನು ಸರ್ಕಾರ ಸಮತೋಲನದಿಂದ ನಿಭಾಯಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ರೈತರಿಗೆ ಹೆಚ್ಚಿನ ಬೆಲೆ ನೀಡುವ ನಿರ್ಧಾರವನ್ನು ಸ್ವಾಗತಿಸುವುದಾಗಿ ತಿಳಿಸಿರುವ ಅವರು, ಅದರ ಸಂಪೂರ್ಣ ಹೊರೆ ಗ್ರಾಹಕರ ಮೇಲೆ ಬೀಳದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಈ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ ₹10 ಸಹಾಯಧನ ನೀಡುವ ತಮ್ಮ ಸಲಹೆಯನ್ನು ಮುಖ್ಯಮಂತ್ರಿ ಹಾಗೂ ಚಿಮುಲ್ ಅಧ್ಯಕ್ಷರು ಗಂಭೀರವಾಗಿ ಪರಿಗಣಿಸಬೇಕು ಎಂದು ಡಾ.ಕೆ. ಸುಧಾಕರ್ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R