
ಬೆಂಗಳೂರು, 28 ನವೆಂಬರ್ (ಹಿ.ಸ.):
ಶೋಷಿತ ಮತ್ತು ಹಿಂದುಳಿದ ಸಮುದಾಯಗಳ ಸಬಲೀಕರಣಕ್ಕೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಈಗಾಗಲೇ ಸಾಕಷ್ಟು ದೇವಸ್ಥಾನ, ಮಠ ಹಾಗೂ ಮಂದಿರಗಳನ್ನು ನಿರ್ಮಿಸಿದ್ದೇವೆ. ಇನ್ನಾದರೂ ಸರಸ್ವತಿ ಮಂದಿರಗಳೆಂಬ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಮುಂದಿನ ಪೀಳಿಗೆಯ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕರೆ ನೀಡಿದರು.
ಶ್ರೀ ನಾರಾಯಣ ಗುರು ಮಹಾ ಒಕ್ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 26 ಪಂಗಡಗಳನ್ನು ಒಳಗೊಂಡಿರುವ ಸಮುದಾಯದಲ್ಲಿ ಅಗಾಧ ಪ್ರತಿಭೆ, ಸಾಮರ್ಥ್ಯ ಮತ್ತು ಆರ್ಥಿಕ ಶಕ್ತಿಯಿದೆ. ಆದರೆ ಈ ಶಕ್ತಿಯನ್ನು ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದರು.
‘ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು’ ಎಂಬ ನಾರಾಯಣ ಗುರುಗಳ ಸಿದ್ಧಾಂತದಲ್ಲಿ ತಮಗೆ ಅಚಲ ನಂಬಿಕೆಯಿದೆ. ಜಾತಿ ತಾರತಮ್ಯ, ಧರ್ಮದ್ವೇಷ ಹಾಗೂ ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ ನಾರಾಯಣ ಗುರುಗಳು ಶಿಕ್ಷಣದ ಮೂಲಕ ಸ್ವಾತಂತ್ರ್ಯ ಮತ್ತು ಸಂಘಟನೆಯ ಮೂಲಕ ಶಕ್ತಿ ಗಳಿಸುವ ಮಾರ್ಗ ತೋರಿಸಿಕೊಟ್ಟಿದ್ದಾರೆ. ಅವರ ತತ್ವಗಳನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮುದಾಯದಲ್ಲಿ ಕೆಲವರು ಆರ್ಥಿಕವಾಗಿ ಸಬಲರಾಗಿದ್ದರೂ ಬಹುಸಂಖ್ಯಾತರು ಬಡತನದಲ್ಲಿದ್ದಾರೆ. ಆರ್ಥಿಕ ಸಂಕಷ್ಟದಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಬಾರದು. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮುದಾಯದ ಶ್ರೀಮಂತರು, ಉದ್ಯಮಿಗಳು ಹಾಗೂ ಸಂಘ-ಸಂಸ್ಥೆಗಳು ಒಗ್ಗೂಡಿ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಣದಿಂದ ಬದುಕಿನಲ್ಲಿ ಬದಲಾವಣೆ ಸಾಧ್ಯ
ದಿವಂಗತ ಆರ್.ಎಲ್.ಜಾಲಪ್ಪ ಅವರ ಆರ್ಥಿಕ ನೆರವಿನಿಂದ ಉನ್ನತ ಶಿಕ್ಷಣ ಪಡೆದ ಸಮುದಾಯದ ಹೆಣ್ಣುಮಗಳೊಬ್ಬರು ಇಂದು ಖರಗ್ಪುರದಲ್ಲಿ ಕ್ಯಾನ್ಸರ್ ಔಷಧಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣಕ್ಕಾಗಿ ಮೂರೂವರೆ ಲಕ್ಷ ರೂ. ಹೊಂದಿಸಲು ಸಾಧ್ಯವಾಗದಿದ್ದ ಆಕೆ ಇಂದು ತಿಂಗಳಿಗೆ ಮೂರೂವರೆ ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ. ಶಿಕ್ಷಣದಿಂದ ವ್ಯಕ್ತಿಯ ಬದುಕಿನಲ್ಲಿ ಎಂತಹ ಮಹತ್ತರ ಬದಲಾವಣೆ ತರಬಹುದು ಎಂಬುದಕ್ಕೆ ಇದು ಉದಾಹರಣೆ ಎಂದು ತಿಳಿಸಿದರು.
ಸ್ವಾಮೀಜಿಗಳು ಒಗ್ಗಟ್ಟಾಗಬೇಕು
ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ ಸಮಾಜದ ಹಿತದೃಷ್ಟಿಯಿಂದ ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಒಂದೇ ವೇದಿಕೆಗೆ ಬರುತ್ತಾರೆ. ಅದೇ ರೀತಿ ಸಮುದಾಯದ ಸ್ವಾಮೀಜಿಗಳೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಸಮಾಜದ ಸಂಘ-ಸಂಸ್ಥೆಗಳು ವೈಯಕ್ತಿಕ ಹಿತಾಸಕ್ತಿಗಳಿಗೆ ಬಳಕೆಯಾಗದೆ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾರಾಯಣ ಗುರುಗಳ ತತ್ವ ಮತ್ತು ಸಿದ್ಧಾಂತಗಳನ್ನು ಪ್ರಸಾರ ಮಾಡುವ ಭವ್ಯ ಆಶ್ರಮ ನಿರ್ಮಿಸುವ ಉದ್ದೇಶವಿದೆ. ಕೇರಳದ ವರ್ಕಳ ಶಿವಗಿರಿ ಮಠದ ಸನ್ಯಾಸಿಗಳ ನೇತೃತ್ವದಲ್ಲಿ ಯುವಜನರಿಗೆ ಶಿಕ್ಷಣ, ಸಂಸ್ಕಾರ, ಕೌಶಲಾಭಿವೃದ್ಧಿ ಹಾಗೂ ಉದ್ಯೋಗಕ್ಕೆ ಮಾರ್ಗದರ್ಶನ ನೀಡುವ ಕೇಂದ್ರವಾಗಿ ಅದನ್ನು ರೂಪಿಸಬೇಕಿದೆ ಎಂದರು.
ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಯಲಿ
ಹಿಂದುಳಿದ ವರ್ಗಗಳು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಜಾತಿಗಣತಿ, ಸ್ಥಳೀಯ ಸಂಸ್ಥೆಗಳ ಮೀಸಲಾತಿ ಹಾಗೂ ಅಭಿವೃದ್ಧಿ ನಿಗಮಗಳಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ಜಾಗೃತರಾಗಿರಬೇಕು. ಸಂವಿಧಾನಬದ್ಧವಾಗಿ ದೊರೆಯಬೇಕಾದ ಹಕ್ಕು ಮತ್ತು ಪಾಲಿಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
“ಸರ್ಕಾರದ ಹಣ ಯಾರೊಬ್ಬರ ವೈಯಕ್ತಿಕ ಸ್ವತ್ತಲ್ಲ. ಜನರು ಬೆವರು ಸುರಿಸಿ ದುಡಿದು, ತೆರಿಗೆ ಪಾವತಿಸಿ ತುಂಬಿದ ಖಜಾನೆಯ ಹಣವದು. ಅದರಲ್ಲಿ ಜನರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪಾಲು ದೊರಕಿಸಿಕೊಡುವುದು ಜನಪ್ರತಿನಿಧಿಗಳ ಜವಾಬ್ದಾರಿ. ಅಧಿಕಾರವೆಂದರೆ ದರ್ಪವಲ್ಲ, ಜನಸೇವೆ” ಎಂದು ಪ್ರತಿಪಾದಿಸಿದರು.
ತಮ್ಮ 53 ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಸಂವಿಧಾನ ಮತ್ತು ನಾರಾಯಣ ಗುರುಗಳ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡು ಶೋಷಿತ ಹಾಗೂ ದಮನಿತ ಸಮುದಾಯಗಳ ಪರವಾಗಿ ಧ್ವನಿ ಎತ್ತುತ್ತಾ ಬಂದಿದ್ದೇನೆ ಎಂದು ಹೇಳಿದರು.
ರಾಷ್ಟ್ರಮಟ್ಟದಲ್ಲಿ ಮಹಾ ಒಕ್ಕೂಟ ವಿಸ್ತರಣೆಯಾಗಲಿ
ನಾರಾಯಣ ಗುರು ಮಹಾ ಒಕ್ಕೂಟ ಕೇವಲ ಕರ್ನಾಟಕಕ್ಕೆ ಸೀಮಿತವಾಗಬಾರದು. ಕೇರಳದ ಈಳವರು, ತಮಿಳುನಾಡಿನ ನಾಡಾರ್ಗಳು, ಮಹಾರಾಷ್ಟ್ರ ಮತ್ತು ಗೋವಾದ ಭಂಡಾರಿಗಳು, ರಾಜಸ್ಥಾನ ಹಾಗೂ ಗುಜರಾತ್ನ ಕಲಾಲ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿರುವ ಸಮುದಾಯಗಳನ್ನು ನಾರಾಯಣ ಗುರುಗಳ ತತ್ವ ಮತ್ತು ಸಿದ್ಧಾಂತಗಳ ಅಡಿಯಲ್ಲಿ ಒಗ್ಗೂಡಿಸಬೇಕು. ರಾಷ್ಟ್ರಮಟ್ಟದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಬಲೀಕರಣಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮಹಾ ಒಕ್ಕೂಟದ ರಚನೆಗೆ ಮುಂದಾಗಿರುವ ಸುಧಾಕರ್ ಅವರ ಪ್ರಯತ್ನವನ್ನು ಶ್ಲಾಘಿಸಿದ ಹರಿಪ್ರಸಾದ್, ಸಮುದಾಯದ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮವನ್ನು ಕೇರಳದ ವರ್ಕಳ ಶಿವಗಿರಿ ಮಠದ ಶ್ರೀ ಋತಂಬರಾನಂದ ಸ್ವಾಮೀಜಿ ಉದ್ಘಾಟಿಸಿದರು. ಸೋಲೂರಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಯೋಗೇಂದ್ರ ಅವಧೂತರು, ಶ್ರೀ ಅರುಣಾನಂದತೀರ್ಥ ಸ್ವಾಮೀಜಿ, ಶ್ರೀ ದೇವಿಕಾನಂದ ಸ್ವಾಮೀಜಿ, ಶ್ರೀ ಶಂಕರಪ್ಪ ಸ್ವಾಮೀಜಿ, ಶ್ರೀ ಭೀಮಾಶಂಕರ ಶರಣ ಸ್ವಾಮೀಜಿ ಹಾಗೂ ಅವಧೂತ ಶ್ರೀ ವಿನಯ್ ಗುರೂಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.