
ವಿಜಯಪುರ, 28 ನವೆಂಬರ್ (ಹಿ.ಸ.)
ಸಮಾಜದಲ್ಲಿನ ಅಜ್ಞಾನ, ಅಸಮಾನತೆ ಹಾಗೂ ಮೌಢ್ಯತೆಯ ಕತ್ತಲೆಯನ್ನು ತೊಡೆದುಹಾಕಿ ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಬೆಳಕನ್ನು ಸಮಾಜಕ್ಕೆ ನೀಡಿದ ಮಹಾನ್ ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆಯನ್ನು ಗೌರವದಿಂದ ಆಚರಿಸಲಾಯಿತು ಎಂದು ಶಾಸಕ ಸುನೀಲ್ ಗೌಡ ಪಾಟೀಲ್ ತಿಳಿಸಿದರು
ಸ್ತ್ರೀ ಶಿಕ್ಷಣದ ಹರಿಕಾರ, ಶೋಷಿತ ಸಮುದಾಯಗಳ ಧ್ವನಿ ಹಾಗೂ ಸಾಮಾಜಿಕ ಪರಿವರ್ತನೆಯ ಮುಂಚೂಣಿ ನಾಯಕರಾಗಿದ್ದ ಜ್ಯೋತಿಬಾ ಫುಲೆ ಅವರು ತಮ್ಮ ಜೀವನವನ್ನೇ ಸಮಾಜ ಸುಧಾರಣೆಯ ಕಾರ್ಯಕ್ಕೆ ಮುಡಿಪಾಗಿಟ್ಟಿದ್ದರು. ಮಹಿಳೆಯರು ಮತ್ತು ಹಿಂದುಳಿದ ವರ್ಗಗಳಿಗೆ ಶಿಕ್ಷಣ ದೊರೆಯಬೇಕು, ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕು ಹಾಗೂ ಗೌರವ ಸಿಗಬೇಕು ಎಂಬ ಉದ್ದೇಶದಿಂದ ಅವರು ನಿರಂತರ ಹೋರಾಟ ನಡೆಸಿದ್ದರು.
ಶಿಕ್ಷಣವೇ ಸಾಮಾಜಿಕ ಬದಲಾವಣೆಯ ಪ್ರಮುಖ ಅಸ್ತ್ರ ಎಂಬುದನ್ನು ತಮ್ಮ ಕಾರ್ಯಗಳ ಮೂಲಕ ತೋರಿಸಿಕೊಟ್ಟ ಅವರು, ಶೋಷಣೆ, ಜಾತಿ ತಾರತಮ್ಯ ಮತ್ತು ಮೌಢ್ಯತೆಯ ವಿರುದ್ಧ ಧ್ವನಿ ಎತ್ತಿದ್ದರು. ಅವರ ಸಾಮಾಜಿಕ ಕಳಕಳಿ, ದೂರದೃಷ್ಟಿ ಹಾಗೂ ಹೋರಾಟದ ಬದುಕು ಇಂದಿನ ಸಮಾಜಕ್ಕೂ ದಾರಿದೀಪವಾಗಿದೆ.
ಮಹಾತ್ಮ ಜ್ಯೋತಿಬಾ ಫುಲೆ ಅವರ ಆದರ್ಶಗಳು, ವಿಚಾರಧಾರೆಗಳು ಮತ್ತು ಸಮಾಜಮುಖಿ ಹೋರಾಟಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು ಎಂದು ಸ್ಮರಿಸಲಾಯಿತು.
ಮಹಾನ್ ಸಮಾಜ ಸುಧಾರಕರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande