
ಕನಕಪುರ, 28 ನವೆಂಬರ್ (ಹಿ.ಸ.)
“ನನಗೆ ಜಾತಿಯ ಮೇಲೆ ನಂಬಿಕೆ ಇಲ್ಲ. ಮನುಷ್ಯತ್ವವೇ ಬಹಳ ಮುಖ್ಯ. ಮಾನವೀಯತೆಯೇ ಬಹುದೊಡ್ಡ ಧರ್ಮ ಎಂದು ನಂಬಿದ್ದೇನೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳು ಹಾಗೂ ಬಸವಣ್ಣನವರ ಆಶಯಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದೇನೆ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನಕಪುರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಪರಿಶಿಷ್ಟ ಜಾತಿ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕೃತಜ್ಞತಾ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
“ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾರನ್ನೂ ನೀವು ಯಾವ ಜಾತಿಗೆ ಸೇರಿದವರು ಎಂದು ಕೇಳಿಲ್ಲ. ನನಗೆ ಜಾತಿಗಿಂತ ವ್ಯಕ್ತಿ ಮತ್ತು ಅವರ ಮೇಲಿನ ನಂಬಿಕೆ ಮುಖ್ಯ. ನನಗೆ ದೊರೆತಿರುವ ಅಧಿಕಾರ ನನ್ನದಲ್ಲ, ಅದು ನಿಮ್ಮದು. ಸಾತನೂರು ಮತ್ತು ಕನಕಪುರದ ಜನತೆ ನನ್ನನ್ನು 10 ಬಾರಿ ಆಯ್ಕೆ ಮಾಡಿ ಆಶೀರ್ವದಿಸಿದ್ದಾರೆ. ಈ ಸನ್ಮಾನದ ಶ್ರೇಯಸ್ಸು ನಿಮಗೆ ಸಲ್ಲಬೇಕು. ನೀವು ನೀಡಿರುವ ನಂಬಿಕೆಯನ್ನು ಉಳಿಸಿಕೊಂಡು ಕ್ಷೇತ್ರದ ಗೌರವ ಹೆಚ್ಚಿಸುವ ಕೆಲಸ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ನಾನು ನಿಮ್ಮ ಮನೆಯ ಮಗ, ನುಡಿದಂತೆ ನಡೆಯುತ್ತೇನೆ
“ನಾನು ಈವರೆಗೆ ನಿಮಗೆ ನೀಡಿದ ಮಾತಿನಂತೆ ನಡೆದುಕೊಂಡಿದ್ದೇನೆ. ಮುಂದೆಯೂ ಹಾಗೆಯೇ ನಡೆದುಕೊಳ್ಳುತ್ತೇನೆ. ಕನಕಪುರ ಕ್ಷೇತ್ರದ ರಸ್ತೆ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದೇನೆ. ಕನಕಪುರ ಎಂದಾಕ್ಷಣ ಇಡೀ ದೇಶವೇ ತಿರುಗಿ ನೋಡುವಂತೆ ಮಾಡುವುದು ನನ್ನ ಗುರಿ ಮತ್ತು ಜವಾಬ್ದಾರಿ” ಎಂದರು.
ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಸ್ಮರಿಸಿದ ಅವರು, “ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ ಚುನಾವಣೆಗೆ ವೈರಮುಡಿ ಅವರನ್ನು ಆಯ್ಕೆ ಮಾಡಿದ್ದೆ. ನನ್ನ ನಿರ್ಧಾರವನ್ನು ನೋಡಿ ಹಲವರು ನಕ್ಕಿದ್ದರು. ತಡೆಯಲು ಹಲವು ಪ್ರಯತ್ನಗಳಾದರೂ ನಾನು ಜಗ್ಗಲಿಲ್ಲ. ನನಗೆ ಜಾತಿ ಮುಖ್ಯವಲ್ಲ, ವ್ಯಕ್ತಿ ಮತ್ತು ನಂಬಿಕೆ ಮುಖ್ಯ” ಎಂದು ಹೇಳಿದರು.
“ಮಳವಳ್ಳಿಯಿಂದ ಕುಣಿಗಲ್ ಗಡಿ ಹಾಗೂ ದೇವನಹಳ್ಳಿವರೆಗೆ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಿಸಿದ ಬಳಿಕ ಆಸ್ತಿಗಳ ಮೌಲ್ಯ ಹೆಚ್ಚಾಗಿದೆ ಎಂಬುದು ನಿಮಗೆ ತಿಳಿದಿದೆ. ಹೆಸರು ಬದಲಿಸಿರುವುದು ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಎಂದು ಕೆಲವರು ಆರೋಪಿಸಿದ್ದಾರೆ. ನಾನು ಎಂದಾದರೂ ನಿಮ್ಮ ಬಳಿ ಬಂದು ಭೂ ವ್ಯವಹಾರ ಮಾಡಿದ್ದೇನೆಯೇ?” ಎಂದು ಪ್ರಶ್ನಿಸಿದರು.
“ನಾನು ನಿಮ್ಮ ಮನೆಯ ಮಗನಂತೆ ಇದ್ದು, ನಿಮಗೆ ಗೌರವ ತರುವ ಕೆಲಸ ಮಾಡುತ್ತೇನೆ. ನಾನು ಮುಖ್ಯಮಂತ್ರಿಯಾಗಿರಬಹುದು. ಆದರೆ ನಿಮ್ಮ ಮುಂದೆ ಮುಖ್ಯಮಂತ್ರಿ ಎಂಬ ಅಧಿಕಾರವನ್ನು ತೋರಿಸಿಕೊಳ್ಳುವ ಅಗತ್ಯವಿಲ್ಲ. ಒಂದು ಸಂದರ್ಭದಲ್ಲಿ ನನ್ನ ಮತ್ತು ಚಂದ್ರಶೇಖರಮೂರ್ತಿ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ನನಗೆ ಟಿಕೆಟ್ ತಪ್ಪಿಸಲಾಗಿತ್ತು. ಆಗ ನೀವು ನನ್ನ ಬೆಂಬಲಕ್ಕೆ ನಿಂತು ಸೈಕಲ್ ಗುರುತಿನಲ್ಲಿ ಚುನಾವಣೆ ಎದುರಿಸಲು ನೆರವಾಗಿದ್ದೀರಿ. ಪರಿಶಿಷ್ಟ ಜಾತಿ, ಧರ್ಮ ಹಾಗೂ ಹಿಂದುಳಿದ ವರ್ಗಗಳ ಜನರು ಬೆಂಬಲ ನೀಡಿದ್ದರು. ಕೇವಲ ಮೂರು ಸಾವಿರ ಮತಗಳನ್ನು ಪಡೆದಿದ್ದರೂ ಎರಡನೇ ಬಾರಿ ನನ್ನನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಟ್ಟಿದ್ದೀರಿ. ಇದನ್ನು ಮರೆಯಲು ಸಾಧ್ಯವಿಲ್ಲ” ಎಂದು ಹೇಳಿದರು.
ಐದು ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರೂ. ವೆಚ್ಚ
“ಈ ಬಾರಿ ಮತ ಕೇಳಲು ನಿಮ್ಮ ಬಳಿಗೆ ಬರಲು ಸಾಧ್ಯವಾಗಿರಲಿಲ್ಲ. ಸಿದ್ದರಾಮಯ್ಯ ಮತ್ತು ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಚುನಾವಣೆ ಎದುರಿಸಿದೆವು. ಜನರು 136 ಸ್ಥಾನಗಳನ್ನು ಗೆಲ್ಲಿಸಿಕೊಟ್ಟರು. ಕ್ಷೇತ್ರದ ಹಾಗೂ ರಾಜ್ಯದ ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡಲಾಗುತ್ತಿದೆ. ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ 52 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದ್ದೇವೆ” ಎಂದರು.
ಪಿಂಚಣಿ ಪಡೆಯಲು ಲಂಚ ನೀಡುವ ಪದ್ಧತಿಗೆ ಕಡಿವಾಣ
“ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದರೆ 2 ಸಾವಿರ ರೂ. ಲಂಚ ನೀಡಬೇಕಾದ ಪರಿಸ್ಥಿತಿ ಇತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಸಮಿತಿ ರಚಿಸಿ, ಅರ್ಜಿಗಳನ್ನು ಪಡೆದು ವೃದ್ಧಾಪ್ಯ ಸೇರಿದಂತೆ ಎಲ್ಲ ರೀತಿಯ ಪಿಂಚಣಿಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದೇನೆ. ಬಡವರಿಗಾಗಿ 15 ಸಾವಿರ ನಿವೇಶನಗಳನ್ನು ಹಂಚಲು ಸಿದ್ಧತೆ ನಡೆಸಲಾಗಿದೆ. ಕನಕಪುರದಲ್ಲಿ ಈಗಾಗಲೇ 80 ನಿವೇಶನಗಳನ್ನು ಹಂಚಿಕೆ ಮಾಡಿದ್ದೇವೆ. ಬಡವರಿಗೆ 20x30 ಅಡಿ ಬದಲಾಗಿ 30x40 ಅಡಿ ನಿವೇಶನ ನೀಡುವಂತೆ ಮಾರ್ಗದರ್ಶನ ನೀಡಿದ್ದೇನೆ. ಪ್ರತಿಯೊಬ್ಬ ಬಡವರೂ ಕಾರು ಖರೀದಿಸಬೇಕು, ಮನೆಯಲ್ಲಿ ಹಸು ಕಟ್ಟಿಕೊಳ್ಳಬೇಕು ಎಂಬುದು ನನ್ನ ಆಸೆ. ಇದಕ್ಕಾಗಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇನೆ” ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಪೂರ್ಣಗೊಳಿಸುವುದು ಶತಸಿದ್ಧ
“ನಮ್ಮ ಕ್ಷೇತ್ರದ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯಬೇಕು. ಯಾರೂ ಉದ್ಯೋಗ ಅರಸಿ ವಲಸೆ ಹೋಗಬಾರದು ಎಂಬ ಉದ್ದೇಶದಿಂದ ಚನ್ನಪಟ್ಟಣ ಮತ್ತು ರಾಮನಗರದ ನಡುವೆ ಬೃಹತ್ ಹಾಲಿನ ಡೇರಿ ಸ್ಥಾಪಿಸಿದ್ದೇವೆ. ಹಾಲಿನ ಬೆಲೆಯನ್ನು 7 ರೂ. ಹೆಚ್ಚಿಸಿ ರೈತರ ಬದುಕು ಹಸನಾಗಿಸಲು ಕ್ರಮ ಕೈಗೊಂಡಿದ್ದೇವೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿದ್ದೇವೆ. ಇನ್ನು ಎರಡು ತಿಂಗಳಲ್ಲಿ ಪ್ರತಿ ಹಳ್ಳಿಗೂ ಕಾವೇರಿ ನೀರು ಹರಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ” ಎಂದರು.
“ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಟ್ಟಿರುವ ನೀವು ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸುವಂತೆ ಆದೇಶಿಸಿದ್ದೀರಿ. ಅದಕ್ಕೆ ತಲೆಬಾಗಿ ಯೋಜನೆ ರೂಪಿಸಿದ್ದೇವೆ. ಉಚ್ಚತಮ ನ್ಯಾಯಾಲಯದಲ್ಲಿಯೂ ನಮಗೆ ನ್ಯಾಯ ಸಿಕ್ಕಿದೆ. ಈ ಯೋಜನೆ ನನ್ನ ಅಧಿಕಾರಾವಧಿಯಲ್ಲಿಯೇ ಪೂರ್ಣಗೊಳ್ಳಬೇಕು. ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳು
“ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳಿವೆ. ಚನ್ನಪಟ್ಟಣದಲ್ಲಿ ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜು, ರಾಮನಗರದಲ್ಲಿ ವಿಶ್ವವಿದ್ಯಾಲಯ, ಹಾರೋಹಳ್ಳಿ ಮತ್ತು ಕನಕಪುರದ ನಡುವೆ ದಯಾನಂದ ಸಾಗರ ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾಗುತ್ತಿವೆ. ಇಡೀ ದೇಶದಲ್ಲಿ ನಾಲ್ಕು ಕಾಲೇಜುಗಳು ಒಂದೇ ಕ್ಷೇತ್ರದಲ್ಲಿ ಇರುವ ಉದಾಹರಣೆ ಬೇರೆಲ್ಲೂ ಇಲ್ಲ. ಇದು ನಮ್ಮ ಕ್ಷೇತ್ರದ ಹೆಗ್ಗಳಿಕೆ” ಎಂದು ಹೇಳಿದರು.
“ಸಾತನೂರು, ಕೆಂಬಾಳ, ಕಲ್ಲಹಳ್ಳಿ, ಮರಿಯ್ಯನದೊಡ್ಡಿ ಸೇರಿದಂತೆ ಸುಮಾರು 10 ಕಡೆ ಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ನಾನು ಪಡೆದ ಶಿಕ್ಷಣಕ್ಕಿಂತಲೂ ಉತ್ತಮ ಶಿಕ್ಷಣವನ್ನು ನೀವು ಪಡೆಯಬೇಕು. ಪ್ರತಿಯೊಬ್ಬರೂ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಬೇಕು ಎಂಬುದು ನನ್ನ ಆಸೆ” ಎಂದರು.
ನನ್ನ ಭೇಟಿ ಇನ್ನು ಸುಲಭವಾಗಲಿದೆ
“ಕ್ಷೇತ್ರದ ಜನರಿಗೆ ನನ್ನನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಅರಿವು ನನಗಿದೆ. ಈಗ ಹೊಸ ಮನೆ ಗಂಗಾಗೆ ತೆರಳಿದ್ದೇನೆ. ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಕ್ಷೇತ್ರದ ಜನರ ಭೇಟಿಗೆ ಹೆಚ್ಚಿನ ಸಮಯ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇನೆ. ಟೀಕೆ ಮಾಡುವವರು ಮಾಡಲಿ, ಅದರ ಬಗ್ಗೆ ಚಿಂತೆಯಿಲ್ಲ. ನಾನು ಏನು ಎಂಬುದು ನಿಮಗೆ ತಿಳಿದಿದೆ” ಎಂದು ಹೇಳಿದರು.
ರೈತರು ಮತ್ತು ಗ್ರಾಮೀಣ ಜನರ ಅಭಿವೃದ್ಧಿಗೆ ಆದ್ಯತೆ
“ನಾನು ನೀಡಿರುವ ಭರವಸೆಗಳಂತೆ ನಡೆದುಕೊಂಡಿದ್ದೇನೆ. ನೇಗಿಲಯೋಗಿ ಕಾರ್ಯಕ್ರಮದಡಿ ರೈತರಿಗೆ ಉಚಿತವಾಗಿ ಹೊಲ ಉಳುಮೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ತೇಗದಸಿರಿ ಯೋಜನೆಯಡಿ ರಸ್ತೆ ಬದಿಗಳಲ್ಲಿ ತೇಗದ ಮರಗಳನ್ನು ಬೆಳೆಸಿ, ಅದರಿಂದ ದೊರೆಯುವ ಆದಾಯದಲ್ಲಿ ಶೇ.70ರಷ್ಟು ರೈತರಿಗೆ ಹಾಗೂ ಶೇ.30ರಷ್ಟು ಸರ್ಕಾರಕ್ಕೆ ದೊರೆಯುವಂತೆ ಯೋಜನೆ ರೂಪಿಸಲಾಗಿದೆ. ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವ ಪ್ರಜಾಸೇವೆ ಯೋಜನೆಯನ್ನೂ ಜಾರಿಗೊಳಿಸಿದ್ದೇನೆ” ಎಂದರು.
“ಈ ದೇಶದ ಸಂವಿಧಾನ ನಮಗೆ ಹಕ್ಕು, ಸಮಾನತೆ ಹಾಗೂ ಧರ್ಮದ ಸ್ವಾತಂತ್ರ್ಯವನ್ನು ನೀಡಿದೆ. ನನಗೆ ಸಂವಿಧಾನವೇ ಮುಖ್ಯ. ಮುಸ್ಲಿಮರು, ಕ್ರೈಸ್ತರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಹಿಂದುಳಿದ ವರ್ಗಗಳ ಜನರೆಲ್ಲರೂ ಸಮಾನರು. ಸೂರ್ಯ ಮತ್ತು ಚಂದ್ರನಿಗೆ ಜಾತಿ ಇದೆಯೇ? ಸೂರ್ಯ ಬೆಳಕು ನೀಡುವಾಗ ಯಾರ ಜಾತಿಯನ್ನಾದರೂ ಕೇಳುತ್ತಾನೆಯೇ? ಹಾಗೆಯೇ ಎಲ್ಲ ಧರ್ಮಗಳೂ ನನಗೆ ಮುಖ್ಯ. ಸರ್ವಧರ್ಮಗಳನ್ನೂ ಸಮಾನವಾಗಿ ಗೌರವಿಸುತ್ತೇನೆ. ಬಸವಣ್ಣನವರ ತತ್ವಗಳು ಮತ್ತು ಅಂಬೇಡ್ಕರ್ ಅವರ ಚಿಂತನೆಗಳ ಮೂಲಕ ಸಮಾನತೆಯ ಹಾದಿಯಲ್ಲಿ ಸಾಗುತ್ತಿದ್ದೇನೆ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.