ಪ್ರಜಾಸೇವೆ ಸದ್ಬಳಕೆ ಮಾಡಿಕೊಳ್ಳಿ: ಎ.ಸಿ. ಎಚ್.ಡಿ. ರಾಜೇಶ್
ಬಳ್ಳಾರಿ, 28 ನವೆಂಬರ್ (ಹಿ.ಸ.) ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕಚೇರಿಗಳಿಗೆ ಅಲೆದು ಬೇಸತ್ತ ನಿಮಗೆ, ನಿಮ್ಮ ಮನೆ ಬಾಗಿಲಿಗೇ ''ಪ್ರಜಾಸೇವೆ'' ಬಂದಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಹಾಯಕ ಆಯುಕ್ತ (ಎ.ಸಿ) ಎಚ್.ಡಿ. ರಾಜೇಶ್ ಕರೆ ನೀಡಿದರು. ತಾಲ್ಲೂಕಿನ ಹಲಕುಂದಿ ಗ್ರಾಮದ ಪೋ
ಪ್ರಜಾಸೇವೆ ಸದ್ಬಳಕೆ ಮಾಡಿಕೊಳ್ಳಿ: ಎ.ಸಿ. ಎಚ್.ಡಿ. ರಾಜೇಶ್ ಕರೆ


ಪ್ರಜಾಸೇವೆ ಸದ್ಬಳಕೆ ಮಾಡಿಕೊಳ್ಳಿ: ಎ.ಸಿ. ಎಚ್.ಡಿ. ರಾಜೇಶ್ ಕರೆ


ಬಳ್ಳಾರಿ, 28 ನವೆಂಬರ್ (ಹಿ.ಸ.)

ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕಚೇರಿಗಳಿಗೆ ಅಲೆದು ಬೇಸತ್ತ ನಿಮಗೆ, ನಿಮ್ಮ ಮನೆ ಬಾಗಿಲಿಗೇ 'ಪ್ರಜಾಸೇವೆ' ಬಂದಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಹಾಯಕ ಆಯುಕ್ತ (ಎ.ಸಿ) ಎಚ್.ಡಿ. ರಾಜೇಶ್ ಕರೆ ನೀಡಿದರು.

ತಾಲ್ಲೂಕಿನ ಹಲಕುಂದಿ ಗ್ರಾಮದ ಪೋತಪ್ಪಕಟ್ಟೆ ಬಳಿಯ ಸಮುದಾಯ ಭವನದ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ 'ಪ್ರಜಾಸೇವಾ ಕಾರ್ಯಕ್ರಮ'ದಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಎಲ್ಲ ಅಧಿಕಾರಿಗಳು ತೆರಳಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಕಾಲಮಿತಿಯೊಳಗೆ ಸಮಸ್ಯೆ ಪರಿಹರಿಸಲು ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ ವಿವಿಧೆಡೆ ಸ್ವೀಕರಿಸಿದ ಅಹವಾಲುಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಬರುವ ಎಲ್ಲವನ್ನೂ ಇತ್ಯರ್ಥಗೊಳಿಸಲಾಗಿದೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಆನ್ಲೈನ್ನ ಐಪಿಜಿಆರ್ಎಸ್ (IPGRS) ಪೋರ್ಟಲ್ನಲ್ಲಿ ಸಲ್ಲಿಸುವಾಗ ಪೂರಕ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕು ಎಂದರು.

ಕಾನೂನ್ವಯ ಸರ್ಕಾರದಿಂದ ಗುರುತಿಸಿರುವ ಜಮೀನಿನಲ್ಲಿ ಮನೆ ನೀಡಲಾಗುವುದು. ಜಿಲ್ಲೆಗೆ 15 ಲಕ್ಷ ನಿವೇಶನಗಳು ಮಂಜೂರಾಗಿದ್ದು, ಸದ್ಯ ಪ್ರಾಥಮಿಕವಾಗಿ 5 ಲಕ್ಷ ನಿವೇಶನಗಳನ್ನು ಕೆಎಂಇಆರ್ಸಿ (KMERC) ಅಡಿಯಲ್ಲಿ ಒದಗಿಸಲು ಮುಂದಾಗಿದ್ದೇವೆ. ಆನ್ಲೈನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ ಬಳಿಕ ಶೀಘ್ರವೇ ಅರ್ಜಿ ಸ್ವೀಕಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮಸ್ಥರ ಆಕ್ರೋಶ, ಮನವಿ: ಸಭೆಯಲ್ಲಿ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಹಲವರು ಕಾನೂನುಬದ್ಧವಾಗಿ ನಿವೇಶನ ನೀಡುವಂತೆ ಮನವಿ ಸಲ್ಲಿಸಿದರು. ಹಲಕುಂದಿಯಲ್ಲಿ ಫಲಾನುಭವಿಗಳಿಗೆ ಸಮರ್ಪಕವಾಗಿ ಮನೆಗಳು ಮಂಜೂರಾಗದಿರುವ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿದರು. ಬೇಸಿಗೆ ಬಂದರೆ ಮಾತ್ರ ಕೆರೆಯಲ್ಲಿ ನೀರು ಇರುತ್ತದೆ; ಉಳಿದ ದಿನಗಳಲ್ಲಿ ಕೆರೆಯಲ್ಲಿ ನೀರಿಲ್ಲದೆ ತೀವ್ರ ಸಮಸ್ಯೆಯಾಗುತ್ತಿದೆ. ಅಲ್ಲದೆ, ಸರ್ವರ್ ಸಮಸ್ಯೆಯ ನೆಪವೊಡ್ಡಿ ನ್ಯಾಯಬೆಲೆ ಅಂಗಡಿಯಲ್ಲಿ ಕೆಲವು ದಿನಗಳು ಮಾತ್ರ ಪಡಿತರ ಧಾನ್ಯ ವಿತರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ತಹಶೀಲ್ದಾರ್ ನರಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ. ಇಒ ಶ್ರೀಧರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande