

ಬಳ್ಳಾರಿ, 28 ನವೆಂಬರ್ (ಹಿ.ಸ.)
ಮಿಂಚೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 11 ಕಾಡು ಮೊಲಗಳನ್ನು ಬೇಟೆ ಆಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಮೂವರನ್ನು ಬಂಧಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಗಳು ಕೋನಾಪುರ ಗ್ರಾಮದ ಬಿ.ಟಿ. ಆಂಜನೇಯ (33), ನಿಂಗಣ್ಣ (31) ಹಾಗೂ ಗಂಗಾಧರ ಗೆಜ್ಜಲ ಮಾರಣ್ಣ (27). ಆರೋಪಿಗಳು ಬಳ್ಳಾರಿ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಯ ಮಿಂಚೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೆ ನಂ. 65ರ ಬಸಪ್ಪನ ಕೊಳ್ಳದ ಸಮೀಪ ಕಾಡು ಮೊಲಗಳನ್ನು ಬೇಟೆಯಾಡಿ ಅಕ್ರಮವಾಗಿ ಸಾಗಿಸುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರೋಪಿಗಳಿಂದ ಬೇಟೆ ಆಡಿರುವ ಮೊಲಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಮುಂದಿನ ಕಾನೂನು ಪ್ರಕ್ರಿಯೆಗಾಗಿ ಅವರನ್ನು ಬಳ್ಳಾರಿಯ ಮೂರನೇ ಹೆಚ್ಚುವರಿ ಪ್ರಥಮ ದರ್ಜೆ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್