ಬರ ಅಧ್ಯಯನ ತಂಡ ಕಳುಹಿಸಿದರೆ ಪರಿಹಾರ ಕೊಟ್ಟಂತಾಗುತ್ತದೆಯೇ? ಕೇಂದ್ರದ ವಿರುದ್ಧ ಶಿವಲಿಂಗೇಗೌಡ ಆಕ್ರೋಶ
ಚನ್ನರಾಯಪಟ್ಟಣ, 28 ನವೆಂಬರ್ (ಹಿ.ಸ.) ಕರ್ನಾಟಕದಿಂದ ಸುಮಾರು 4.75 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ, ರಾಜ್ಯ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದಾಗ ಪರಿಹಾರ ನೀಡಲು ಹಿಂದೇಟು ಹಾಕುತ್ತಿರುವುದೇಕೆ? ಬರ ಅಧ್ಯಯನ ತಂಡವನ್ನು ಕಳುಹಿಸಿದರೆ ಪರಿಹಾರ ಕೊಟ್ಟಂತಾಗುತ್ತದೆಯೇ? ಎಂದು ಅಬಕಾರಿ
ಸಚಿವ ಕೆ.ಎಂ.ಶಿವಲಿಂಗೇಗೌಡ


ಚನ್ನರಾಯಪಟ್ಟಣ, 28 ನವೆಂಬರ್ (ಹಿ.ಸ.)

ಕರ್ನಾಟಕದಿಂದ ಸುಮಾರು 4.75 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ, ರಾಜ್ಯ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದಾಗ ಪರಿಹಾರ ನೀಡಲು ಹಿಂದೇಟು ಹಾಕುತ್ತಿರುವುದೇಕೆ? ಬರ ಅಧ್ಯಯನ ತಂಡವನ್ನು ಕಳುಹಿಸಿದರೆ ಪರಿಹಾರ ಕೊಟ್ಟಂತಾಗುತ್ತದೆಯೇ? ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಚನ್ನರಾಯಪಟ್ಟಣದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ತಾರತಮ್ಯದ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನಾವು ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಒಕ್ಕೂಟ ವ್ಯವಸ್ಥೆಯನ್ನು ನಡೆಸುತ್ತಿದ್ದೇವೆ. ರಾಜ್ಯ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದಾಗ ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು. ಆದರೆ ಅಧ್ಯಯನ ತಂಡ ಕಳುಹಿಸಿ, ಇಲ್ಲಿಯವರೆಗೆ ಒಂದು ಬಿಡಿಗಾಸನ್ನೂ ಪರಿಹಾರವಾಗಿ ನೀಡಿಲ್ಲ. ಇದು ಪಕ್ಷಪಾತವಲ್ಲವೇ?” ಎಂದು ಪ್ರಶ್ನಿಸಿದರು.

“ಈ ಹಿಂದೆಯೂ ಬರ ಪರಿಹಾರ ನೀಡದಿದ್ದಾಗ ರಾಜ್ಯ ಸರ್ಕಾರ ಉಚ್ಚತಮ ನ್ಯಾಯಾಲಯದ ಮೆಟ್ಟಿಲೇರಿ 3,500 ಕೋಟಿ ರೂ. ಅನುದಾನ ಪಡೆಯಬೇಕಾಯಿತು. ಪ್ರತಿ ಬಾರಿಯೂ ನ್ಯಾಯಾಲಯದ ಮೊರೆ ಹೋಗಬೇಕಾದರೆ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಅರ್ಥವೇನು? ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಸಾಗಬೇಕೆಂಬ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ತಾರತಮ್ಯದ ನೀತಿ ಅನುಸರಿಸುತ್ತಿರುವುದೇಕೆ?” ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಈಗಾಗಲೇ ರೈತರಿಗೆ 5 ಸಾವಿರ ರೂ. ನೆರವು ನೀಡುತ್ತಿದೆ. ರಾಜ್ಯದಿಂದ ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರವೂ ತಕ್ಷಣ ಬರ ಪರಿಹಾರ ಘೋಷಿಸಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮತ್ತೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವೇ ಎಂಬುದನ್ನು ಮುಂಬರುವ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಬರ ಪರಿಹಾರ ಮಾತ್ರವಲ್ಲದೆ ರಾಜ್ಯಕ್ಕೆ ಆಗುತ್ತಿರುವ ಎಲ್ಲ ಅನ್ಯಾಯಗಳ ವಿರುದ್ಧವೂ ರಾಜಕಾರಣಿಗಳು ಪಕ್ಷಭೇದ ಮರೆತು ಪಕ್ಷಾತೀತವಾಗಿ, ಒಕ್ಕೊರಲಿನಿಂದ ಹೋರಾಟ ನಡೆಸಬೇಕು. ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಕರೆ ನೀಡಿದರು.

ಕಾಡಾನೆ ಸಮಸ್ಯೆ ಪರಿಹಾರಕ್ಕೆ ನ.30ರಂದು ಮಹತ್ವದ ಸಭೆ

ಕಾಡಾನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನವೆಂಬರ್ 30ರಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಜನಪ್ರತಿನಿಧಿಗಳ ಮಹತ್ವದ ಸಭೆ ನಡೆಯಲಿದೆ ಎಂದು ಶಿವಲಿಂಗೇಗೌಡ ತಿಳಿಸಿದರು.

“ಸಭೆಯಲ್ಲಿ ಕಾಡಾನೆ ಸಮಸ್ಯೆಯನ್ನು ಸೂಕ್ಷ್ಮವಾಗಿ ಚರ್ಚಿಸಿ, ಪ್ರಾಮಾಣಿಕವಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಈ ಕುರಿತು ನನ್ನದೇ ಆದ ಕೆಲವು ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಿದ್ದೇನೆ. ಸಮಸ್ಯೆಯನ್ನು ಹೀಗೆಯೇ ಮುಂದುವರಿಸಲು ಸಾಧ್ಯವಿಲ್ಲ. ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲೇಬೇಕಿದೆ” ಎಂದರು.

ಈ ಹಿಂದೆ ಸ್ಥಳಾಂತರಿಸಲಾಗಿದ್ದ ಕಾಡಾನೆಗಳು ಮತ್ತೆ ವಾಪಸ್ ಬಂದಿರುವುದು ಹಾಗೂ ಕಾಡಾನೆ ಕಾರ್ಯಾಚರಣೆಗೆ ಸ್ಥಳೀಯ ಶಾಸಕರು ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕ್ಷೇತ್ರದ ಜನರ ಅಭಿಪ್ರಾಯದ ಆಧಾರದ ಮೇಲೆ ಶಾಸಕರು ಕಾರ್ಯಾಚರಣೆ ಬೇಡ ಎಂದು ಹೇಳಿರಬಹುದು. ಆದರೆ ಅಲ್ಲಿ ವನ್ಯಪ್ರಾಣಿಗಳಿಗಾಗಿ ಮೀಸಲಾದ ಅಭಯಾರಣ್ಯವಿದೆ. ಆನೆಗಳು ಸೇರಿದಂತೆ ವನ್ಯಪ್ರಾಣಿಗಳನ್ನು ಅಲ್ಲಿಗೆ ಬಿಡಲಾಗುತ್ತದೆ. ಮಧ್ಯದ ಗ್ರಾಮಗಳ ಮೂಲಕ ಆನೆಗಳನ್ನು ಸಾಗಿಸುವಾಗ ಅಲ್ಲಿಯೇ ಬಿಟ್ಟುಬಿಡಬಹುದು ಎಂಬ ಭಾವನಾತ್ಮಕ ಆತಂಕದಿಂದ ವಿರೋಧ ವ್ಯಕ್ತವಾಗಿರಬಹುದು. ನಾವೆಲ್ಲ ಶಾಸಕರು ಒಟ್ಟಿಗೆ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರು.

ಆನೆಗಳ ನಿರ್ವಹಣೆ ಕುರಿತು ತಮಗೆ ನೇರ ಅನುಭವವಿಲ್ಲ ಎಂಬುದನ್ನು ಒಪ್ಪಿಕೊಂಡ ಸಚಿವರು, ತಮ್ಮ ಭಾಗದಲ್ಲಿ ಈ ಹಿಂದೆ ಒಮ್ಮೆ ಆನೆ ಕಾಣಿಸಿಕೊಂಡಿದ್ದು, ಅದನ್ನು ಸೆರೆಹಿಡಿದು ಸ್ಥಳಾಂತರಿಸಲಾಗಿತ್ತು. ಕೇರಳ ಸೇರಿದಂತೆ ವಿವಿಧ ಆನೆ ಧಾಮಗಳಲ್ಲಿ ಆನೆಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತಿದೆ ಎಂಬುದರ ಕುರಿತು ಅಧ್ಯಯನ ನಡೆಸಿ, ನವೆಂಬರ್ 30ರ ಸಭೆಯಲ್ಲಿ ಆ ವಿಚಾರಗಳನ್ನು ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande