ಗೂಡ್ಸ್ ವಾಹನ–ಬೈಕ್ ನಡುವೆ ಭೀಕರ ಅಪಘಾತ; ತಂದೆ, 3 ವರ್ಷದ ಮಗಳು ದುರ್ಮರಣ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗಂಗನರಸಿ ಕ್ರಾಸ್ ಬಳಿ ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 35 ವರ್ಷದ ತಂದೆ ಹಾಗೂ 3 ವರ್ಷದ ಮಗಳು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
Davanagere-Goods-Vehicle-Bike-Accident-Father-Daughter-Killed


ದಾವಣಗೆರೆ, 28 ನವೆಂಬರ್ (ಹಿ.ಸ.):

ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಮತ್ತು ಮೂರು ವರ್ಷದ ಮಗಳು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೀಟೂರು ಗ್ರಾಮದ ಗಂಗನರಸಿ ಕ್ರಾಸ್ ಬಳಿ ನಡೆದಿದೆ.

ಹರಿಹರ ನಗರದ ಆಶ್ರಯ ಕಾಲೊನಿ ನಿವಾಸಿ, ಟ್ಯಾಕ್ಸಿ ಚಾಲಕ ಮನೋಜ್ (35) ಹಾಗೂ ಅವರ ಪುತ್ರಿ ಧೃತಿ (3) ಮೃತಪಟ್ಟವರು. ಅಪಘಾತದಲ್ಲಿ ಮನೋಜ್ ಅವರ ಪತ್ನಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಮನೋಜ್ ಅವರು ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಎಚ್. ಕಲ್ಪನಹಳ್ಳಿಯಲ್ಲಿ ಹಬ್ಬ ಮುಗಿಸಿಕೊಂಡು ಬೈಕ್ನಲ್ಲಿ ಹರಿಹರಕ್ಕೆ ವಾಪಸಾಗುತ್ತಿದ್ದರು. ಈ ವೇಳೆ ಗಂಗನರಸಿ–ದೀಟೂರು ರಸ್ತೆಯ ಗಂಗನರಸಿ ಕ್ರಾಸ್ ಬಳಿ ಎದುರಿನಿಂದ ಬಂದ ಗೂಡ್ಸ್ ವಾಹನ ಬೈಕ್ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಐವರೂ ರಸ್ತೆಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ ಮತ್ತು ಮಗಳು ಧೃತಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಬಂಧ ಗೂಡ್ಸ್ ವಾಹನದ ಚಾಲಕನ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande