
ವಿಜಯಪುರ, 28 ನವೆಂಬರ್ (ಹಿ.ಸ.)
ವಿಜಯಪುರ ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಶ್ರೇಷ್ಠ ಸಂತ, ದಾರ್ಶನಿಕ ಹಾಗೂ ಸಮಾಜ ಸುಧಾರಕ ಭಕ್ತ ಕನಕದಾಸರ ಜಯಂತಿಯನ್ನು ಗೌರವ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ ಮಾತನಾಡಿ, ಭಕ್ತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತಿ ಪದ್ಧತಿ, ಅಸಮಾನತೆ ಹಾಗೂ ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿದ ಮಹಾನ್ ಸಂತರು. ತಮ್ಮ ಸಾಹಿತ್ಯ ಮತ್ತು ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾನತೆ, ಮಾನವೀಯತೆ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಸಮಾಜಕ್ಕೆ ಸಾರಿದ್ದಾರೆ ಎಂದು ಹೇಳಿದರು.
ಕನಕದಾಸರ ತತ್ವ, ಆದರ್ಶ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಆಧ್ಯಾತ್ಮಿಕ ಪಯಣ, ಸಾಹಿತ್ಯಿಕ ಕೊಡುಗೆ ಮತ್ತು ಸಮಾಜ ಸುಧಾರಣೆಯ ಕಾರ್ಯಗಳು ಇಂದಿನ ಸಮಾಜಕ್ಕೂ ಪ್ರೇರಣೆಯಾಗಿವೆ ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಕುಲಸಚಿವ ಡಾ. ಆರ್.ವಿ. ಕುಲಕರ್ಣಿ ಮಾತನಾಡಿ, ಭಕ್ತ ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಸಂತವಾಗಿರದೆ, ಇಡೀ ಸಮಾಜ ಹಾಗೂ ಜಗತ್ತಿಗೆ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರಾಗಿದ್ದಾರೆ ಎಂದು ತಿಳಿಸಿದರು.
ಅವರ ಆದರ್ಶಗಳನ್ನು ನಮ್ಮ ನಡೆ-ನುಡಿಗಳಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಸಮಾಜದಲ್ಲಿ ಉತ್ತಮ ಬದಲಾವಣೆ ಹಾಗೂ ಸುಧಾರಣೆ ತರಲು ಸಾಧ್ಯ. ಕನಕದಾಸರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಜನತೆ ಅವರ ಸಾಹಿತ್ಯ ಮತ್ತು ಜೀವನ ಸಂದೇಶಗಳನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಉಪಪ್ರಾಂಶುಪಾಲ ಡಾ. ಆನಂದ ಪಿ. ಅಂಬಲಿ, ಹಿರಿಯ ಉಪಪ್ರಾಚಾರ್ಯ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಡೀನ್ ಅಲೈಡ್ ಹೆಲ್ತ್ ಸೈನ್ಸಸ್ ಡಾ. ಎಸ್.ವಿ. ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ಎಸ್.ಎನ್. ಬೆಂಟೂರ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಎಂ.ಎಂ. ಪಾಟೀಲ, ಪ್ಯಾಥಲಾಜಿ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾ ಹಿಪ್ಪರಗಿ, ಡಾ. ಪ್ರಕಾಶ ಪಾಟೀಲ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಡಾ. ಆರ್.ಜಿ. ಕುಲಕರ್ಣಿ, ಹಣಕಾಸು ಅಧಿಕಾರಿ ಬಿ.ಎಸ್. ಪಾಟೀಲ, ಸಹಾಯಕ ಕುಲಸಚಿವ ಡಾ. ಶ್ರೀಧರ ಬಗಲಿ, ಡಾ. ಮಹಾದೇವಿ ವಾಲಿ, ಆನಂದ ಪಾಟೀಲ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೂಲಕ ಭಕ್ತ ಕನಕದಾಸರ ಸಾಮಾಜಿಕ ಚಿಂತನೆ, ಸಾಹಿತ್ಯಿಕ ಸಾಧನೆ ಹಾಗೂ ಸಮಾನತೆಯ ಆಶಯಗಳನ್ನು ಸ್ಮರಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande