ಜಾತ್ಯತೀತತೆ ಹೆಸರಲ್ಲಿ ಹಿಂದೂಗಳ ಕಡೆಗಣನೆ: ನಟ ಜಗ್ಗೇಶ್
ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂಗಳ ಆಚರಣೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮದ ಪರಂಪರೆಯನ್ನು ತುಳಿಯಲು ಪ್ರಯತ್ನಿಸದಂತೆ ಎಚ್ಚರಿಕೆ ನೀಡಿದ್ದು, ಅನ್ಯಾಯವನ್ನು ಚಂಡಾಡಿ ಧರ್ಮ ಉಳಿಸಲು ಕಲ್ಕಿ ಬರುತ್ತಾನೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
jaggesh-warns-kalki-will-come-to-protect-sanatan-dharma


ಬೆಂಗಳೂರು, 27 ನವೆಂಬರ್ (ಹಿ.ಸ.):

ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂಗಳ ಆಚರಣೆ ಹಾಗೂ ಸಂಪ್ರದಾಯಗಳನ್ನು ಕಡೆಗಣಿಸಲಾಗುತ್ತಿದೆ ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸನಾತನ ಧರ್ಮದ ಪ್ರತಿಯೊಂದು ಆಚರಣೆಯ ಹಿಂದೆಯೂ ನಮ್ಮ ಪೂರ್ವಜರ ವೈಜ್ಞಾನಿಕ ಚಿಂತನೆ ಅಡಗಿದೆ. ಸನಾತನ ಧರ್ಮವನ್ನು ತುಳಿಯಲು ಪ್ರಯತ್ನಿಸಬೇಡಿ, ಅನ್ಯಾಯವನ್ನು ಚಂಡಾಡಿ ಧರ್ಮವನ್ನು ಉಳಿಸಲು ಕಲ್ಕಿ ಬರುತ್ತಾನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಜಗ್ಗೇಶ್, ಭಾರತ ಹಿಂದೂಗಳು ಬಹುಸಂಖ್ಯಾತರಾಗಿರುವ ರಾಷ್ಟ್ರ ಎಂಬುದನ್ನು ಮುಂದಿನ ಎಲ್ಲ ತಲೆಮಾರುಗಳು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ರಾಜಕೀಯ ಲಾಭಕ್ಕಾಗಿ ಜಾತ್ಯತೀತತೆಯ ಹೆಸರಿನಲ್ಲಿ 'ಸೆಕ್ಯುಲರ್' ಪದವನ್ನು ಬಳಸಿಕೊಂಡು ಅಧಿಕಾರ ಪಡೆಯಬಹುದು. ಆದರೆ ಯಾರೂ ಶಾಶ್ವತವಲ್ಲ. ಇಂದು ಮಾಡುವ ತಪ್ಪುಗಳಿಗೆ ಮುಂದಿನ ತಲೆಮಾರುಗಳು ನಿಮ್ಮನ್ನು ಪ್ರಶ್ನಿಸಲಿವೆ.

ಸ್ವಾರ್ಥದ ರಾಜಕಾರಣಕ್ಕಾಗಿ ಹಿಂದೂಗಳ ಆಚರಣೆಗಳನ್ನು ಹಾಳುಮಾಡಿದಿರಿ ಎಂದು ನಿಮ್ಮದೇ ಕುಟುಂಬದ ಮುಂದಿನ ತಲೆಮಾರುಗಳು ಗೋಡೆಯ ಮೇಲಿನ ನಿಮ್ಮ ಚಿತ್ರವನ್ನು ನೋಡಿ ಶಪಿಸುವ ಪರಿಸ್ಥಿತಿ ಬರಬಹುದು ಎಂದು ಕಿಡಿಕಾರಿದ್ದಾರೆ.

ಸನಾತನ ಧರ್ಮದ ಪ್ರತಿಯೊಂದು ಆಚರಣೆಯ ಹಿಂದೆಯೂ ಪೂರ್ವಜರ ವೈಜ್ಞಾನಿಕ ಚಿಂತನೆ ಇದೆ. ಭಾರತವನ್ನು ಆಳಿದ ಅನೇಕರು ಸನಾತನ ಧರ್ಮದ ಪರಂಪರೆ ಮತ್ತು ಕಲ್ಪನೆಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ.

ಆದರೂ ಉಳಿದಿರುವ ಅಲ್ಪಸ್ವಲ್ಪ ಕುರುಹುಗಳು ಇಂದು ಮತ್ತೆ ಚಿಗುರಿ ಹೆಮ್ಮರವಾಗಿ ಬೆಳೆಯುತ್ತಿವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದೇ ಸನಾತನ ಧರ್ಮದ ಶಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದಿನ ಸನಾತನ ಧರ್ಮದ ಬೇರಿನಿಂದಲೇ ಇಂದಿನ ತಲೆಮಾರು ಚಿಗುರಿದೆ ಎಂಬುದನ್ನು ಮರೆಯಬಾರದು. ಸನಾತನ ಧರ್ಮವನ್ನು ತುಳಿಯಲು ಪ್ರಯತ್ನಿಸಬೇಡಿ. ಅನ್ಯಾಯವನ್ನು ಚಂಡಾಡಿ ಸನಾತನ ಧರ್ಮವನ್ನು ಉಳಿಸಲು ಕಲ್ಕಿ ಬರುತ್ತಾನೆ ಎಂದು ಜಗ್ಗೇಶ್ ತಮ್ಮ ಪೋಸ್ಟ್ನಲ್ಲಿ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande