ಸಿಎಂ ಡಿಕೆಶಿ ನಿವಾಸ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ;ಆರೋಪಿ ಬಂಧನ
ಬೆಂಗಳೂರು, 27 ನವೆಂಬರ್ (ಹಿ.ಸ.): ಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದಲ್ಲಿರುವ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವ ನಗರ ಠಾಣೆ ಪೋಲಿಸರು ಒರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
bomb-threat-to-dk-shivakumar-residence-and-vidhana-soudha-anonymous-call-through-auto-driver


ಬೆಂಗಳೂರು, 27 ನವೆಂಬರ್ (ಹಿ.ಸ.):

ಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದಲ್ಲಿರುವ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವ ನಗರ ಠಾಣೆ ಪೋಲಿಸರು ಒರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆಟೋ ಚಾಲಕನ ಮೊಬೈಲ್ ಮೂಲಕ ಪೊಲೀಸರಿಗೆ ಕರೆ ಮಾಡಿರುವ ದುಷ್ಕರ್ಮಿ ಬಾಂಬ್ ಬೆದರಿಕೆ ಹಾಕಿದ್ದು, ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ನವೆಂಬರ್ 7ರಂದು ಈ ಘಟನೆ ನಡೆದಿದ್ದು, ಭಗವಂತರಾಯನ್ ಎಂಬುವವರು ನಮ್ಮ ಯಾತ್ರಿ ಆ್ಯಪ್ ಮೂಲಕ ಆಟೋ ಚಾಲನೆ ಮಾಡುತ್ತಿದ್ದರು. ಅಂದು ಕಾರ್ತಿಕ್ ಎಂಬ ಹೆಸರಿನಲ್ಲಿ ಸದಾಶಿವನಗರದಿಂದ ಆರ್.ಆರ್. ನಗರಕ್ಕೆ ತೆರಳಲು ಆಟೋ ಬುಕ್ ಮಾಡಲಾಗಿತ್ತು. ಬುಕ್ಕಿಂಗ್ ವೇಳೆ ನೀಡಿದ್ದ ಪಿಕಪ್ ಸ್ಥಳ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದ ಸಮೀಪ ತೋರಿಸಿತ್ತು.

ಹೀಗಾಗಿ ಸ್ಥಳಕ್ಕೆ ತೆರಳಿದ ಆಟೋ ಚಾಲಕ, ಬುಕ್ಕಿಂಗ್ ಮಾಡಿದ್ದ ವ್ಯಕ್ತಿಗೆ ಕರೆ ಮಾಡಿದ್ದಾನೆ. ಈ ವೇಳೆ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ತಾನು ಸಿಎಂ ನಿವಾಸದಲ್ಲಿರುವುದಾಗಿ ತಿಳಿಸಿ, ಬ್ಯಾರಿಕೇಡ್ ಬಳಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಮೊಬೈಲ್ ನೀಡುವಂತೆ ಸೂಚಿಸಿದ್ದಾನೆ. ಅದರಂತೆ ಆಟೋ ಚಾಲಕ ಪೊಲೀಸರಿಗೆ ಫೋನ್ ನೀಡಿದ್ದಾನೆ.

ಪೊಲೀಸರು ಕರೆ ಸ್ವೀಕರಿಸುತ್ತಿದ್ದಂತೆ ಮಾತನಾಡಿದ ಅಪರಿಚಿತ ವ್ಯಕ್ತಿ, ಮುಖ್ಯಮಂತ್ರಿ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿ ಕರೆ ಕಡಿತಗೊಳಿಸಿದ್ದಾನೆ. ಇದರಿಂದ ಎಚ್ಚೆತ್ತ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಶೀಲನೆ ಆರಂಭಿಸಿದ್ದಾರೆ.

ಮೊದಲಿಗೆ ಪಿಕಪ್ ಸ್ಥಳಕ್ಕೆ ಬಂದಿದ್ದ ಆಟೋವನ್ನು ಪರಿಶೀಲಿಸಿದ ಪೊಲೀಸರು, ಬಳಿಕ ಮುಖ್ಯಮಂತ್ರಿ ನಿವಾಸ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ್ದಾರೆ. ಆದರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ಪರಿಶೀಲನೆಯ ಬಳಿಕ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕ ಭಗವಂತರಾಯನ್ ನೀಡಿದ ದೂರಿನ ಮೇರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande