
ವಿಜಯಪುರ, 27 ನವೆಂಬರ್ (ಹಿ.ಸ.)
ಸಮಾಜದಲ್ಲಿ ನಿರ್ಗತಿಕರು, ವೃದ್ಧರು ಹಾಗೂ ಅನಾಥ ಮಕ್ಕಳಿಗೆ ಆಶ್ರಯ ಮತ್ತು ನೆರವು ಒದಗಿಸುವ ಉದ್ದೇಶದಿಂದ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಶ್ರೀ ಅನ್ನದಾನೇಶ್ವರಿ ಟ್ರಸ್ಟ್ ವತಿಯಿಂದ ವೃದ್ಧಾಶ್ರಮ ಹಾಗೂ ಅನಾಥಾಶ್ರಮವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಮುಖ್ಯಸ್ಥ ಅನಸೂಯ ತಿಳಿಸಿದ್ದಾರೆ
ಈ ಆಶ್ರಮಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ನವೆಂಬರ್ 28, 2026ರಂದು ಶನಿವಾರ ಸಂಜೆ 4 ಗಂಟೆಗೆ ಮುತ್ತಗಿ ಗ್ರಾಮದ ಶ್ರೀ ಸಿದ್ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ವೃದ್ಧಾಪ್ಯದಲ್ಲಿ ಆರೈಕೆ ಹಾಗೂ ಆಸರೆಯ ಅಗತ್ಯವಿರುವ ಹಿರಿಯರಿಗೆ ಮತ್ತು ಪೋಷಕರಿಲ್ಲದ ಅನಾಥ ಮಕ್ಕಳಿಗೆ ಆಶ್ರಯ ಕಲ್ಪಿಸುವ ಸದುದ್ದೇಶದಿಂದ ಈ ಸೇವಾಕಾರ್ಯಕ್ಕೆ ಮುಂದಾಗಿರುವುದು ವಿಶೇಷವಾಗಿದೆ. ಸಮಾಜದ ನಿರ್ಗತಿಕರು ಹಾಗೂ ಅಸಹಾಯಕರಿಗೆ ನೆರವಾಗುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಇಂತಹ ಸೇವಾ ಸಂಸ್ಥೆಗಳ ಪ್ರಮುಖ ಆಶಯವಾಗಿದೆ.
ಈ ಸಮಾಜಮುಖಿ ಕಾರ್ಯದ ಪ್ರಾರಂಭೋತ್ಸವಕ್ಕೆ ಸಾರ್ವಜನಿಕರು, ಗಣ್ಯರು, ದಾನಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಶ್ರೀ ಅನ್ನದಾನೇಶ್ವರಿ ಟ್ರಸ್ಟ್ ವತಿಯಿಂದ ಆಹ್ವಾನಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande