
ಮಂಡ್ಯ, 27 ನವೆಂಬರ್ (ಹಿ.ಸ.):
ಸರ್ಕಾರಿ ಕಾಲೇಜಿನಲ್ಲಿ ಜೆಡಿಎಸ್ ಮುಖಂಡರಿಗೆ ನೀರಿನ ಬಾಟಲಿ ವಿತರಿಸಲು ಅಡ್ಡಿಪಡಿಸಲಾಗಿದೆ ಎಂಬ ಆರೋಪ ಶುದ್ಧ ಸುಳ್ಳು. ರಾಜಕೀಯ ಪ್ರಚಾರಕ್ಕಾಗಿ ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಾಸಕ ಗಣಿಗ ಪಿ. ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಕಾಲೇಜಿನ ಅಧ್ಯಕ್ಷನಾಗಿ ನಾನಿದ್ದೇನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರೆ ನಾನೇ ಟಿಪ್ಪಣಿಯನ್ನು ಹಾಕಿಸುತ್ತಿದ್ದೆ. ಎಚ್.ಡಿ. ಕುಮಾರಸ್ವಾಮಿ ಅವರನ್ನು ನಾನು ಪ್ರೀತಿಸುವ ವ್ಯಕ್ತಿ. ರಾಜಕೀಯ ಬೇರೆ ಇರಬಹುದು, ವೈಯಕ್ತಿಕ ಸಂಬಂಧವೇ ಬೇರೆ ಎಂದು ಸ್ಪಷ್ಟಪಡಿಸಿದರು.
ಆಸ್ಪತ್ರೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಭಾವಚಿತ್ರಕ್ಕೆ ಪಟ್ಟಿ ಅಂಟಿಸಿದ ವಿಚಾರವನ್ನು ನಾನೂ ಖಂಡಿಸುತ್ತೇನೆ. ಆದರೆ ಆ ಘಟನೆಯನ್ನು ನಮ್ಮ ತಲೆಗೆ ಕಟ್ಟುತ್ತಿರುವುದು ಸರಿಯಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಧಿಕಾರಿಗಳು ನಾಟಕ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಎರಡೂ ಪಕ್ಷಗಳ ನಡುವೆ ಸಂಘರ್ಷ ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಜಿಲ್ಲಾಧಿಕಾರಿಗಳು ಈ ಸಂಬಂಧ ನೋಟಿಸ್ ನೀಡಿದ್ದಾರೆ. ಜೆಡಿಎಸ್ ಚಿಹ್ನೆ ಇರುವ ಕಾರಣಕ್ಕೆ ಕಾಂಗ್ರೆಸ್ನವರು ಅದನ್ನು ತೆಗೆಸಲು ಹೇಳಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಅಧಿಕಾರಿಗಳು ಯಾರ್ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಆಗ್ರಹಿಸಿದರು.
ಕೆಡಿಪಿ ಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನಾಮಫಲಕ ತೆಗೆಸಿದ ವಿಚಾರದ ಬಗ್ಗೆಯೂ ಸ್ಪಷ್ಟನೆ ನೀಡಿದ ಅವರು, ಕುಮಾರಸ್ವಾಮಿ ಅವರನ್ನು ನಾನು ಬೈದಿಲ್ಲ. ನನ್ನ ಹೆಸರು ಎಲ್ಲಿ ಕಾಣಿಸುತ್ತಿಲ್ಲ ಎಂದು ಪ್ರಶ್ನಿಸಿದ್ದೇನೆ ಅಷ್ಟೇ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿರುಚಿ ಅಪಪ್ರಚಾರ ಮಾಡುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು.
ಇನ್ನು ಎಆರ್ಎಐ ಘಟಕದ ವಿಚಾರವಾಗಿ ಜಿಲ್ಲಾಧಿಕಾರಿಗಳು ನೀಡಿದ ಹೇಳಿಕೆಯನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು. ರಾಜಕೀಯ ಆರೋಪ-ಪ್ರತ್ಯಾರೋಪಗಳ ಬದಲಿಗೆ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಗಣಿಗ ಪಿ. ರವಿಕುಮಾರ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R