
ವಿಜಯಪುರ, 27 ನವೆಂಬರ್ (ಹಿ.ಸ.)
ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡ್ ಸದಸ್ಯರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶದ ಕುರಿತು ಹೋರಾಟಗಾರ ಮೈನುದ್ದೀನ್ ಬಿಳಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದ್ದು, ಪಾಲಿಕೆ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಾಲಿಕೆ ಸದಸ್ಯರು ನ್ಯಾಯಾಲಯದಲ್ಲಿ ಪ್ರಕರಣ ಗೆದ್ದಿದ್ದೇವೆ ಎಂದು ಹೇಳಿಕೊಂಡು ಸಾರ್ವಜನಿಕರಲ್ಲಿ ಸಿಹಿ ಹಂಚಿ ಸಂಭ್ರಮಿಸುತ್ತಿರುವುದು ಸರಿಯಲ್ಲ. ಹೈಕೋರ್ಟ್ ಸದಸ್ಯರಿಗೆ ಸಂಪೂರ್ಣ ಕ್ಲೀನ್ಚಿಟ್ ನೀಡಿದೆ ಎಂಬ ರೀತಿಯಲ್ಲಿ ಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಮೈನುದ್ದೀನ್ ಬಿಳಗಿ ಆಕ್ಷೇಪ ವ್ಯಕ್ತಪಡಿಸಿದರು.
35 ಪಾಲಿಕೆ ಸದಸ್ಯರಿಗೆ ಬಹಿರಂಗ ಸವಾಲು ಹಾಕಿದ ಅವರು, ನಿಜವಾಗಿಯೂ ತಾವು ಅನರ್ಹರಲ್ಲ ಎಂಬ ವಿಶ್ವಾಸವಿದ್ದರೆ ಮುಂದಿನ 10ರಿಂದ 15 ದಿನಗಳೊಳಗಾಗಿ ಬೆಳಗಾವಿಯ ಆರ್ಸಿ (RC) ಕಚೇರಿಯಿಂದ ತಾವು ಅನರ್ಹರಲ್ಲ ಎಂಬ ಅಧಿಕೃತ ಪ್ರಮಾಣಪತ್ರ ಪಡೆದು ಸಾರ್ವಜನಿಕರ ಮುಂದೆ ಪ್ರದರ್ಶಿಸಲಿ ಎಂದು ಒತ್ತಾಯಿಸಿದರು.
ಹೈಕೋರ್ಟ್ ಆದೇಶದ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ನ್ಯಾಯಾಲಯದ ಆದೇಶದ ನೈಜ ಅರ್ಥವನ್ನು ಮರೆಮಾಚಿ ಪ್ರಕರಣದಲ್ಲಿ ಸಂಪೂರ್ಣ ಜಯ ಸಾಧಿಸಿದ್ದೇವೆ ಎಂದು ಬಿಂಬಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.
ಇದೇ ವೇಳೆ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ಬೆಳವಣಿಗೆಗಳು ಹಾಗೂ ಭ್ರಷ್ಟಾಚಾರದ ಕುರಿತು ಗಂಭೀರ ಆರೋಪಗಳನ್ನು ಮಾಡಿದರು. ಪಾಲಿಕೆಯ ಕಾರ್ಯವೈಖರಿ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಇರಬೇಕು. ಸಾರ್ವಜನಿಕರ ತೆರಿಗೆ ಹಣ ಸದ್ಬಳಕೆಯಾಗಬೇಕು. ಪಾಲಿಕೆಯಲ್ಲಿ ನಡೆಯುತ್ತಿರುವ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಮೈನುದ್ದೀನ್ ಬಿಳಗಿ ಅವರ ಈ ಹೇಳಿಕೆ ವಿಜಯಪುರ ಮಹಾನಗರ ಪಾಲಿಕೆಯ 35 ಸದಸ್ಯರ ಅನರ್ಹತೆ ಪ್ರಕರಣದ ಕುರಿತು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande