ಕನಕದಾಸರ ತತ್ವ, ಭಕ್ತಿಯೇ ಸಮಾಜಕ್ಕೆ ದೊಡ್ಡ ಸಂದೇಶ: ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು, 27 ನವೆಂಬರ್ (ಹಿ.ಸ.): ಜಾತಿ, ಕುಲದ ಹೆಸರಿನಲ್ಲಿ ಭೇದಭಾವ ಮಾಡುವುದನ್ನು ಬಿಟ್ಟು ಮಾನವೀಯತೆ ಮತ್ತು ಸಮಾನತೆಯ ತತ್ವಗಳನ್ನು ಪಾಲಿಸಬೇಕು ಎಂಬ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದೇ ಆ ಮಹಾನ್ ದಾಸರಿಗೆ ಸಲ್ಲಿಸುವ ನಿಜವಾದ
ಸಿಎಂ ಫೈಲ್ ಪೋಟೋ


ಬೆಂಗಳೂರು, 27 ನವೆಂಬರ್ (ಹಿ.ಸ.):

ಜಾತಿ, ಕುಲದ ಹೆಸರಿನಲ್ಲಿ ಭೇದಭಾವ ಮಾಡುವುದನ್ನು ಬಿಟ್ಟು ಮಾನವೀಯತೆ ಮತ್ತು ಸಮಾನತೆಯ ತತ್ವಗಳನ್ನು ಪಾಲಿಸಬೇಕು ಎಂಬ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದೇ ಆ ಮಹಾನ್ ದಾಸರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನ ಶಾಸಕರ ಭವನದ ಬಳಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನಕದಾಸರ ತತ್ವ ಮತ್ತು ಭಕ್ತಿಯ ಮಹತ್ವವನ್ನು ಸ್ಮರಿಸಿದರು.

ಕುಲ ಕುಲ ಕುಲವೆಂದು ಹೊಡೆದಾಡಬೇಡಿ, ಇದೆಲ್ಲವನ್ನೂ ಬಿಟ್ಟು ಮಾನವೀಯತೆಯ ಹಾದಿಯಲ್ಲಿ ಸಾಗಬೇಕು ಎಂದು ಕನಕದಾಸರು ನಮಗೆಲ್ಲ ಕಿವಿಮಾತು ಹೇಳಿದ್ದಾರೆ. ಅವರ ಈ ಸಂದೇಶವನ್ನು ನಾವೆಲ್ಲರೂ ಪಾಲಿಸಿದರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ. ಭಕ್ತಿಗೆ ಕೃಷ್ಣನೇ ತಿರುಗಿದ ಪ್ರಸಂಗಕ್ಕಿಂತ ಕನಕದಾಸರ ಭಕ್ತಿಗೆ ಮತ್ತೊಂದು ದೊಡ್ಡ ನಿದರ್ಶನ ಬೇಕಿಲ್ಲ ಎಂದು ಹೇಳಿದರು.

ಭಕ್ತಿಯ ಪರಂಪರೆಯಲ್ಲಿ ಕನಕದಾಸರು ಅತ್ಯಂತ ಶ್ರೇಷ್ಠ ಸ್ಥಾನ ಹೊಂದಿದ್ದಾರೆ. ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ ಬಿಟ್ಟುಹೋದ ಆದರ್ಶಗಳು, ತತ್ವಗಳು ಮತ್ತು ಹೆಜ್ಜೆಗುರುತುಗಳು ಸದಾ ನಮ್ಮೊಂದಿಗೆ ಇರಲಿವೆ. ಅವುಗಳನ್ನು ಪಾಲಿಸಿಕೊಂಡು ನಡೆಯುವುದು ಮುಖ್ಯ. ಅವರ ಸಂದೇಶವನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande