
ವಿಜಯಪುರ, 27 ನವೆಂಬರ್ (ಹಿ.ಸ.)
ಭಕ್ತಿ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಸಂತ ಶ್ರೇಷ್ಠ ಭಕ್ತ ಕನಕದಾಸರು ತಮ್ಮ ಬದುಕು ಹಾಗೂ ಸಾಹಿತ್ಯದ ಮೂಲಕ ಭಕ್ತಿ, ಮಾನವೀಯತೆ ಮತ್ತು ಸಮಾನತೆಯ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸಿದ ಮಹಾನ್ ಚೇತನರಾಗಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನಕದಾಸರು ಭಕ್ತಿ ಮತ್ತು ಮಾನವೀಯತೆಯ ಸಮ್ಮಿಲನವಾಗಿದ್ದರು. ಅವರ ವ್ಯಕ್ತಿತ್ವದಲ್ಲಿ ದೈವಿಕ ಚಿಂತನೆ ಹಾಗೂ ಮಾನವತಾವಾದದ ಉನ್ನತ ಮೌಲ್ಯಗಳು ಮೇಳೈಸಿದ್ದವು. ದೇವರ ಭಕ್ತಿಯೊಂದಿಗೆ ಮನುಕುಲದ ಒಳಿತನ್ನು ಬಯಸಿದ ಅವರು ಸಮಾಜಕ್ಕೆ ಆದರ್ಶಪ್ರಾಯವಾದ ಜೀವನ ನಡೆಸಿದ್ದಾರೆ. ಇಂತಹ ಮಹಾನ್ ಚೇತನರ ಜಯಂತಿ ಆಚರಣೆಯಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಕನಕದಾಸರ ಜೀವನ ಸಂದೇಶಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ, ಅವರ ಆದರ್ಶಗಳನ್ನು ನಿತ್ಯಜೀವನದಲ್ಲಿ ಪಾಲಿಸಬೇಕು. ಅವರ ವಿಚಾರಧಾರೆಗಳು ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪ್ರೇರಣೆಯಾಗಬೇಕು ಎಂದು ಆಶಿಸಿದರು.
ಜಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ಕನಕದಾಸರು
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಉಪನ್ಯಾಸಕ ದಳವಾಯಿ ಅವರು ಮಾತನಾಡಿ, ಕನಕದಾಸರು ತಮ್ಮ ಸಾಹಿತ್ಯ ಮತ್ತು ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಪ್ರಶ್ನಿಸಿ, ಸಮಾನತೆ, ಮಾನವೀಯತೆ ಮತ್ತು ಭಕ್ತಿಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಸಂತರು. ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಕನಕದಾಸರು ಲೌಕಿಕ ಬದುಕಿನ ಅನುಭವದೊಂದಿಗೆ ಆಧ್ಯಾತ್ಮಿಕ ಸಾಧನೆಯನ್ನೂ ಮೈಗೂಡಿಸಿಕೊಂಡಿದ್ದರು. ವಿವಿಧ ಶಾಸ್ತ್ರಗಳು, ತರ್ಕ, ವ್ಯಾಕರಣ ಹಾಗೂ ಸಮರ ಕಲೆಗಳಲ್ಲಿ ಶಿಕ್ಷಣ ಪಡೆದಿದ್ದ ಅವರು, ತಮ್ಮ ಅಧ್ಯಯನ ಮತ್ತು ಅನುಭವದ ಮೂಲಕ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಕೀರ್ತನೆ, ಉಗಾಭೋಗ, ಮುಂಡಿಗೆ ಹಾಗೂ ಕಾವ್ಯಗಳ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ್ದರು ಎಂದರು.
ಕನಕದಾಸರ ಕೀರ್ತನೆಗಳು ಕೇವಲ ಭಕ್ತಿಯ ಅಭಿವ್ಯಕ್ತಿಗಳಲ್ಲ. ಅವು ಸಮಾಜದಲ್ಲಿನ ಅಸಮಾನತೆಗಳನ್ನು ಪ್ರಶ್ನಿಸುವ ವೈಚಾರಿಕ ಬರಹಗಳಾಗಿವೆ. 'ಕುಲ ಕುಲವೆಂದು ಹೊಡೆದಾಡದಿರಿ' ಎಂಬ ಕೀರ್ತನೆಯ ಮೂಲಕ ಜಾತಿ ಆಧಾರಿತ ಭೇದಭಾವವನ್ನು ಖಂಡಿಸಿ, ಮನುಷ್ಯನ ಮೌಲ್ಯ ನಿರ್ಧಾರವಾಗಬೇಕಾದದ್ದು ಆತನ ಗುಣ ಮತ್ತು ನಡವಳಿಕೆಯಿಂದಲೇ ಹೊರತು ಜನ್ಮದಿಂದಲ್ಲ ಎಂಬ ಮಹತ್ವದ ಸಂದೇಶವನ್ನು ಸಾರಿದ್ದಾರೆ ಎಂದು ವಿವರಿಸಿದರು.
ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ
ಕನಕದಾಸರ ಪ್ರಮುಖ ಕೃತಿಗಳಾದ ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯ ಚರಿತ್ರೆ ಹಾಗೂ ಹರಿಭಕ್ತಸಾರ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಿವೆ. ಮೋಹನ ತರಂಗಿಣಿಯಲ್ಲಿ ವಿಜಯನಗರದ ಸಾಂಸ್ಕೃತಿಕ ವೈಭವವನ್ನು, ನಳ ಚರಿತ್ರೆಯಲ್ಲಿ ಪ್ರೀತಿ, ವಿರಹ ಮತ್ತು ಮಾನವೀಯ ಭಾವನೆಗಳನ್ನು ಹಾಗೂ ರಾಮಧಾನ್ಯ ಚರಿತ್ರೆಯಲ್ಲಿ ಶ್ರಮಜೀವಿಗಳ ಬದುಕು ಮತ್ತು ಆಹಾರ ಸಂಸ್ಕೃತಿಯ ಮಹತ್ವವನ್ನು ಚಿತ್ರಿಸಿದ್ದಾರೆ.
ಹರಿಭಕ್ತಸಾರದ ಮೂಲಕ ಭಕ್ತಿಯ ತಾತ್ವಿಕ ಸಾರವನ್ನು ಸರಳ ಕನ್ನಡದಲ್ಲಿ ಅಭಿವ್ಯಕ್ತಿಸಿದ್ದಾರೆ. ಅವರ ಕೃತಿಗಳು ಸಾಹಿತ್ಯಿಕ ಅಭಿವ್ಯಕ್ತಿಗಳಾಗಿರುವುದರ ಜೊತೆಗೆ ಸಾಮಾಜಿಕ ಬದುಕಿಗೆ ಮಾರ್ಗದರ್ಶನ ನೀಡುವ ಚಿಂತನೆಗಳಾಗಿವೆ ಎಂದು ಹೇಳಿದರು.
ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೆ ಸಮಾಜದ ಎಲ್ಲ ವರ್ಗದವರು ಗೌರವಿಸಬೇಕು. ಅವರ ಆದರ್ಶ ಹಾಗೂ ವಿಚಾರಧಾರೆಗಳನ್ನು ಬದುಕಿನಲ್ಲಿ ಪಾಲಿಸುವುದೇ ಮಹನೀಯರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ತಿಳಿಸಿದರು.
ಗಣ್ಯರ ಉಪಸ್ಥಿತಿ, ಭಾವಚಿತ್ರ ಮೆರವಣಿಗೆ
ಕಾರ್ಯಕ್ರಮದಲ್ಲಿ ಮೇಯರ್ ಮಡಿವಾಳಪ್ಪ ಕೋಡಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೊಡೆ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಬಿ. ಕುಂಬಾರ, ಡಿವೈಎಸ್ಪಿ ಉಪಾಸೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹನುಮಂತ ಕಾಲತಿಪ್ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕ್ರೀಡಾಧಿಕಾರಿ ರಾಜಶೇಖರ ದೈವಾಡಿ, ಜವಾಹರ ಗೋಸ್ವಾಮಿ, ಸೋಮನಗೌಡ ಕಲ್ಲೂರ ಹಾಗೂ ಗಿರೀಶ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ಸಂತ ಶ್ರೇಷ್ಠ ಭಕ್ತ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಗಣ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande