ಕನಕದಾಸರ ಜಯಂತಿ: ಸಮಾನತೆ, ಮಾನವೀಯತೆ ಸಾರಿದ ಮಹಾನ್ ಸಂತನಿಗೆ ಗಣ್ಯರ ನಮನ
ಬೆಂಗಳೂರು, 27 ನವೆಂಬರ್ (ಹಿ.ಸ.): ಜಾತಿ ಭೇದ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಹಾಗೂ ಮೂಢನಂಬಿಕೆಗಳ ವಿರುದ್ಧ ತಮ್ಮ ಕೀರ್ತನೆಗಳು ಮತ್ತು ತತ್ತ್ವಪದಗಳ ಮೂಲಕ ಜಾಗೃತಿ ಮೂಡಿಸಿದ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ
ಸಾಂಕೇತಿಕ


ಬೆಂಗಳೂರು, 27 ನವೆಂಬರ್ (ಹಿ.ಸ.):

ಜಾತಿ ಭೇದ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಹಾಗೂ ಮೂಢನಂಬಿಕೆಗಳ ವಿರುದ್ಧ ತಮ್ಮ ಕೀರ್ತನೆಗಳು ಮತ್ತು ತತ್ತ್ವಪದಗಳ ಮೂಲಕ ಜಾಗೃತಿ ಮೂಡಿಸಿದ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಕನಕದಾಸರನ್ನು ಸ್ಮರಿಸಿ ನಾಡಿನ ಜನತೆಗೆ ಜಯಂತಿಯ ಶುಭಾಶಯ ಕೋರಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭಾಶಯ ಸಂದೇಶ ಪ್ರಕಟಿಸಿದ್ದು, ಜಾತಿ ಭೇದ ಮತ್ತು ಅಂಧಶ್ರದ್ಧೆಯ ವಿರುದ್ಧ ತಮ್ಮ ನುಡಿಮುತ್ತುಗಳ ಮೂಲಕ ಜಾಗೃತಿ ಮೂಡಿಸಿದ ಕನಕದಾಸರು ಕರುನಾಡಿನ ಮಹಾನ್ ತತ್ತ್ವಜ್ಞಾನಿ ಎಂದು ಬಣ್ಣಿಸಿದ್ದಾರೆ.

'ಕುಲ ಕುಲವೆಂದು ಹೊಡೆದಾಡದಿರಿ' ಎಂಬ ಸಂದೇಶದ ಮೂಲಕ ಜಗತ್ತಿಗೆ ಸಮಾನತೆಯ ದಾರಿ ತೋರಿದ ಅವರ ಆಲೋಚನೆಗಳು, ದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಮತ್ತು ಸಮಾಜ ಸುಧಾರಣೆಯ ತತ್ತ್ವಗಳು ಎಂದೆಂದಿಗೂ ಅಮರ. ಕನ್ನಡಿಗರ ಮನದಲ್ಲಿ ವೈಚಾರಿಕತೆಯ ಜ್ಯೋತಿ ಬೆಳಗಿಸಿದ ಈ ಮಹಾನ್ ಚೇತನದ ಹಾದಿ ಎಲ್ಲರಿಗೂ ಸದಾ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ನಾಡಿನ ಸಮಸ್ತ ಜನತೆಗೆ ಕನಕದಾಸರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ಜಾತಿ-ಭೇದ, ಮೇಲು-ಕೀಳು ಮತ್ತು ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದ ಕನಕದಾಸರು ಸಮಾಜಕ್ಕೆ ಸಮಾನತೆ, ಸೌಹಾರ್ದತೆ ಹಾಗೂ ಮಾನವೀಯತೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳು ಮತ್ತು ಚಿಂತನೆಗಳು ಎಲ್ಲರಿಗೂ ಸದಾ ಪ್ರೇರಣೆಯಾಗಿವೆ ಎಂದು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಕನಕದಾಸರನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದ್ದಾರೆ. ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಕೀರ್ತನೆಗಳ ಮೂಲಕ ಧ್ವನಿ ಎತ್ತಿದ ಕನಕದಾಸರು ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಜನಮನಕ್ಕೆ ತಲುಪಿಸಿದ್ದಾರೆ ಎಂದು ಹೇಳಿದ್ದಾರೆ.

ಕನಕದಾಸರು ತೋರಿದ ಹಾದಿಯಲ್ಲಿ ಸಾಗುವ ಮೂಲಕ ಜಾತಿ-ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ಮತ್ತು ಪರಸ್ಪರ ಗೌರವದಿಂದ ಬಾಳುವ ಸಮಾಜವನ್ನು ನಿರ್ಮಿಸಬೇಕು. ಸಾಮಾಜಿಕ ಪರಿವರ್ತನೆಯ ಹರಿಕಾರರಾದ ಕನಕದಾಸರನ್ನು ಗೌರವಪೂರ್ವಕವಾಗಿ ಸ್ಮರಿಸಿ ನಮನ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೂಡ ಕನಕದಾಸರ ಜಯಂತಿಯ ಶುಭಾಶಯ ಕೋರಿದ್ದಾರೆ. ತಮ್ಮ ಅಪ್ರತಿಮ ಕೀರ್ತನೆಗಳು ಹಾಗೂ ಕೃತಿಗಳ ಮೂಲಕ ಜಾತಿ ಭೇದಗಳನ್ನು ಧಿಕ್ಕರಿಸಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಹರಿದಾಸ ಶ್ರೇಷ್ಠ ಕನಕದಾಸರ ಬೋಧನೆಗಳು ಸಮಗ್ರ ಮನುಕುಲಕ್ಕೆ ಮುಕ್ತಿಪಥ ತೋರಿವೆ ಎಂದು ಹೇಳಿದ್ದಾರೆ.

ಕನಕದಾಸರ ತತ್ತ್ವಚಿಂತನೆಗಳು ನಾಡಿನಲ್ಲಿ ಭಕ್ತಿಮಾರ್ಗ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂದು ಅವರು ಆಶಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande