ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳ ರಕ್ಷಣೆ ಅಗತ್ಯ
ಬಳ್ಳಾರಿ, 27 ನವೆಂಬರ್ (ಹಿ.ಸ.) ಪ್ರಜಾಪ್ರಭುತ್ವವನ್ನು ಕಾಪಾಡಲು ಮತ್ತು ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳು ಹಾಗೂ ಘನತೆಯನ್ನು ಖಾತ್ರಿಪಡಿಸಲು ಸಂವಿಧಾನದ ಪೀಠಿಕೆಯಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಅತ್ಯಗತ್ಯವಾಗಿವೆ ಎಂದು ಬಳ್ಳಾರಿಯ ಪ್ರಧಾನ ಜಿಲ್ಲಾ ಮತ್ತು ಸತ
ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳ ರಕ್ಷಣೆ ಅಗತ್ಯ


ಬಳ್ಳಾರಿ, 27 ನವೆಂಬರ್ (ಹಿ.ಸ.)

ಪ್ರಜಾಪ್ರಭುತ್ವವನ್ನು ಕಾಪಾಡಲು ಮತ್ತು ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳು ಹಾಗೂ ಘನತೆಯನ್ನು ಖಾತ್ರಿಪಡಿಸಲು ಸಂವಿಧಾನದ ಪೀಠಿಕೆಯಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಅತ್ಯಗತ್ಯವಾಗಿವೆ ಎಂದು ಬಳ್ಳಾರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ದಲಿಂಗ ಪ್ರಭು ಅವರು ಹೇಳಿದರು.

ನಗರದ ವುಂಕಿ ಸಣ್ಣರುದ್ರಪ್ಪ ಕಾನೂನು ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು 'ಮೇರಾ ಯುವ ಭಾರತ್' ಕೇಂದ್ರದ ಸಹಯೋಗದೊಂದಿಗೆ IQAC ಉಪಕ್ರಮದ ಅಡಿಯಲ್ಲಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಆಯೋಜಿಸಿದ್ದ 'ಸಂವಿಧಾನ ದಿನ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೃತ್ತಿಪರ ನೈತಿಕತೆ, ಸತ್ಯನಿಷ್ಠೆ ಮತ್ತು ನ್ಯಾಯದ ಕಡೆಗಿನ ಬದ್ಧತೆ ಉತ್ತಮ ವಕೀಲನ ಪ್ರಮುಖ ಗುಣಗಳಾಗಿವೆ. ವಕೀಲರು ತಮ್ಮ ವೃತ್ತಿಜೀವನದಲ್ಲಿ ಪ್ರಾಮಾಣಿಕರಾಗಿ, ನಿಷ್ಠರಾಗಿ ಮತ್ತು ಜವಾಬ್ದಾರಿಯುತರಾಗಿರಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 'ಮೇರಾ ಯುವ ಭಾರತ್' ಬಳ್ಳಾರಿ ಘಟಕದ ಎರನ್ನ ಗೌಡ ಅವರು 'ವಿಕಸಿತ ಭಾರತ' ಕುರಿತು ಪ್ರತ್ಯೇಕ ಗೋಷ್ಠಿ ನಡೆಸಿಕೊಟ್ಟು, ದೇಶದ ಅಭಿವೃದ್ಧಿಯ ಪಯಣ ಹಾಗೂ 2047ರ ವೇಳೆಗೆ ಭಾರತವನ್ನು 'ಅಭಿವೃದ್ಧಿ ಹೊಂದಿದ ರಾಷ್ಟ್ರ'ವನ್ನಾಗಿಸುವ ದೂರದೃಷ್ಟಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಹೊಸಮನೆ ಹಾಗೂ ಜಿಲ್ಲಾ ಯುವ ಅಧಿಕಾರಿ ರಮೇಶ್ ಮಡ್ಡೆಪ್ಪ ತೊಳಿನವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಭಾರತಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಧ್ಯಕ್ಷ ಟಿ. ನರೇಂದ್ರ ಬಾಬು, ಆಡಳಿತ ಮಂಡಳಿ ಸದಸ್ಯರು, ಗಣ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande