ಹಾಲಿನ ದರ ಏರಿಸಿದರೂ ಹೈನುಗಾರರಿಗೆ ಬಿಡುಗಡೆಯಾಗದ ಪ್ರೋತ್ಸಾಹಧನ: ಆರ್. ಅಶೋಕ್ ಆಕ್ರೋಶ
ಬೆಂಗಳೂರು, 27 ನವೆಂಬರ್ (ಹಿ.ಸ.): ರಾಜ್ಯದಲ್ಲಿ ಹಾಲಿನ ಮಾರಾಟ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ, ಹಾಲು ಉತ್ಪಾದಿಸುವ 28.84 ಲಕ್ಷ ಹೈನುಗಾರರಿಗೆ ಕಳೆದ ಆಗಸ್ಟ್‌ನಿಂದ ಪ್ರೋತ್ಸಾಹಧನ ಬಿಡುಗಡೆ ಮಾಡದೆ ₹486 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ
ಪ್ರತಿಪಕ್ಷ ನಾಯಕ ಅಶೋಕ ಫೈಲ್ ಪೋಟೋ


ಬೆಂಗಳೂರು, 27 ನವೆಂಬರ್ (ಹಿ.ಸ.):

ರಾಜ್ಯದಲ್ಲಿ ಹಾಲಿನ ಮಾರಾಟ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ, ಹಾಲು ಉತ್ಪಾದಿಸುವ 28.84 ಲಕ್ಷ ಹೈನುಗಾರರಿಗೆ ಕಳೆದ ಆಗಸ್ಟ್‌ನಿಂದ ಪ್ರೋತ್ಸಾಹಧನ ಬಿಡುಗಡೆ ಮಾಡದೆ ₹486 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ಪ್ರಕಟಿಸಿರುವ ಅವರು, ಒಂದೆಡೆ ಗ್ರಾಹಕರಿಗೆ ಹಾಲಿನ ದರ ಹೆಚ್ಚಿಸಿ ಹೊರೆಯಾಗಿರುವ ಸರ್ಕಾರ, ಮತ್ತೊಂದೆಡೆ ಹಗಲಿರುಳು ಶ್ರಮಿಸುವ ಹೈನುಗಾರರಿಗೆ ಸಿಗಬೇಕಾದ ಪ್ರೋತ್ಸಾಹಧನವನ್ನು ತಡೆಹಿಡಿದಿದೆ ಎಂದು ಟೀಕಿಸಿದ್ದಾರೆ.

ಹೈನುಗಾರರಿಗೆ ಪ್ರತಿ ಲೀಟರ್‌ಗೆ ₹7 ಹೆಚ್ಚುವರಿ ದರ ಸಿಗುವಂತೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿ ಹಾಲಿನ ಮಾರಾಟ ದರ ಹೆಚ್ಚಿಸಿದ ಸರ್ಕಾರ, ಕಳೆದ ಆಗಸ್ಟ್‌ನಿಂದ ಹೈನುಗಾರರ ಖಾತೆಗಳಿಗೆ ಪ್ರೋತ್ಸಾಹಧನ ಜಮೆ ಮಾಡದಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಪಶು ಆಹಾರ, ಹಸಿರು ಮೇವು ಮತ್ತು ಔಷಧಗಳ ಬೆಲೆ ಹೆಚ್ಚಳದಿಂದ ಹೈನುಗಾರರು ಈಗಾಗಲೇ ಸಂಕಷ್ಟ ಎದುರಿಸುತ್ತಿದ್ದಾರೆ. ರಾಸುಗಳ ನಿರ್ವಹಣೆಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಪ್ರೋತ್ಸಾಹಧನ ಬಿಡುಗಡೆ ಮಾಡದೆ ಹೈನುಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲಾವಾರು ಬಾಕಿ ಮೊತ್ತದ ವಿವರ ನೀಡಿರುವ ಅವರು, ಮಂಡ್ಯದಲ್ಲಿ ₹56.1 ಕೋಟಿ, ಹಾಸನದಲ್ಲಿ ₹54.3 ಕೋಟಿ, ತುಮಕೂರಿನಲ್ಲಿ ₹53 ಕೋಟಿ, ಮೈಸೂರಿನಲ್ಲಿ ₹49.1 ಕೋಟಿ ಹಾಗೂ ರಾಮನಗರದಲ್ಲಿ ₹44 ಕೋಟಿ ಪ್ರೋತ್ಸಾಹಧನ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯನ್ನು ಸರಿದೂಗಿಸಲು ರೈತರ ಪ್ರೋತ್ಸಾಹಧನವನ್ನು ತಡೆಹಿಡಿಯಲಾಗಿದೆಯೇ ಅಥವಾ ಆಧಾರ್ ಜೋಡಣೆ ಮತ್ತು ಇ-ಕೆವೈಸಿ ಪ್ರಕ್ರಿಯೆಗಳ ನೆಪದಲ್ಲಿ ಹಣ ಬಿಡುಗಡೆ ವಿಳಂಬ ಮಾಡಲಾಗುತ್ತಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ರೈತರ ಹೆಸರಿನಲ್ಲಿ ಹಾಲಿನ ದರ ಏರಿಕೆ ಮಾಡಿದರೆ ಸಾಲದು. ದರ ಏರಿಕೆಯಿಂದ ಬಂದ ಹೆಚ್ಚುವರಿ ಆದಾಯದ ಲೆಕ್ಕವನ್ನು ಬಹಿರಂಗಪಡಿಸಬೇಕು. ಬಾಕಿ ಇರುವ ₹486 ಕೋಟಿ ಪ್ರೋತ್ಸಾಹಧನವನ್ನು ಕೂಡಲೇ ಹೈನುಗಾರರ ಖಾತೆಗಳಿಗೆ ಬಿಡುಗಡೆ ಮಾಡಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande