
ಹಾವೇರಿ, 27 ನವೆಂಬರ್ (ಹಿ.ಸ.):
ಹಾವೇರಿಯ ವೈದ್ಯಕೀಯ ಕಾಲೇಜಿಗೆ ಸಂತ ಕನಕದಾಸರ ಹೆಸರಿಡಲಾಗುವುದು. ಕಾಗಿನೆಲೆಯಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ನೀಡಲಾಗುವುದು. ಭೂಮಿ ನೀಡುವ ಶ್ರೀಗಳ ಬೇಡಿಕೆಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
ಶುಕ್ರವಾರ ಕಾಗಿನೆಲೆಯಲ್ಲಿ ನಡೆದ ಕನಕದಾಸರ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ಕೀರ್ತನೆಗಳ ಮೂಲಕ ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಮಹಾನ್ ಕ್ರಾಂತಿಕಾರಿ. ಭಕ್ತಿ ಅವರ ಸಾಧನವಾದರೆ ಸಮಾನತೆ ಅವರ ಸಂದೇಶವಾಗಿತ್ತು. ಅವರ ತತ್ವಗಳನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕನಕದಾಸರಿಗೆ ಜಾತಿಯ ಬಣ್ಣ ಬಳಿಯಬಾರದು. ಬಸವಣ್ಣ, ಕನಕದಾಸರು ಮತ್ತು ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ. ಆತ್ಮಕ್ಕೆ ಕುಲವಿಲ್ಲ ಎಂಬ ಸಂದೇಶವನ್ನು ಸಮಾಜ ಅರಿಯಬೇಕು. ಉಡುಪಿಯಲ್ಲಿ ಕನಕದಾಸರ ಭಕ್ತಿಗೆ ಶ್ರೀಕೃಷ್ಣ ದರ್ಶನ ನೀಡಿದ ಪ್ರಸಂಗ ಅವರ ಭಕ್ತಿಯ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಸ್ಮರಿಸಿದರು.
ಕನಕದಾಸರ ಹಸಿದವರಿಗೆ ಅನ್ನ ನೀಡಬೇಕೆಂಬ ಸಂದೇಶದಂತೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದು, 4.21 ಕೋಟಿ ಜನರಿಗೆ ಇದರ ಪ್ರಯೋಜನ ದೊರೆಯುತ್ತಿದೆ. ಯೋಜನೆಗಾಗಿ ವಾರ್ಷಿಕ 8,500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಜನರ ಆರ್ಥಿಕ ಹೊರೆ ತಗ್ಗಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ 35 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಕನಕದಾಸರ ಕರ್ಮಭೂಮಿ ಕಾಗಿನೆಲೆಯನ್ನು ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಶ್ರೀಗಳು ಮತ್ತು ಸಮಿತಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣ ಪ್ರವೇಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಶೇ.7.5ರಷ್ಟು ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದೆ. ಜಿಲ್ಲೆಯ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯಡಿ 137 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಈಗಾಗಲೇ 115 ಕೋಟಿ ರೂ.ಗೂ ಅಧಿಕ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಬರ ಪರಿಹಾರವಾಗಿ ರೈತರ ಖಾತೆಗೆ ತಲಾ 5 ಸಾವಿರ ರೂ. ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಕನಕದಾಸರ ಪುತ್ಥಳಿ ಅನಾವರಣಗೊಳಿಸಿದ ಮುಖ್ಯಮಂತ್ರಿ, ಜಾತಿ, ಧರ್ಮ ಮತ್ತು ಪಕ್ಷಭೇದ ಮರೆತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ತಮ್ಮನ್ನು ನಾಡಿನ ದೊರೆ ಎಂದು ಕರೆಯುವ ಬದಲು ಪ್ರಜಾಸೇವಕ ಎಂದು ಕರೆಯಬೇಕು. ಎಲ್ಲ ಸಮುದಾಯಗಳನ್ನು ಸಮಾನವಾಗಿ ಕೊಂಡೊಯ್ಯುವುದು ತಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.