
ಧಾರವಾಡ, 27 ನವೆಂಬರ್ (ಹಿ.ಸ.):
ಧಾರವಾಡ ನಗರದ ಕಲ್ಯಾಣನಗರದ ಮಹಾಮನೆ ಬಡಾವಣೆಯ ಉದ್ಯಾನವನದ ಸಮೀಪ ಸಾರ್ವಜನಿಕ ರಸ್ತೆಯ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮತ್ತು ಸಾಗಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 24ರಂದು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಉಪನಗರ ಪೊಲೀಸ್ ಠಾಣೆ ಮತ್ತು ಅಪರಾಧ ಪತ್ತೆ ದಳದ ಸಿಬ್ಬಂದಿ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ್, ಉಪ ಪೊಲೀಸ್ ಆಯುಕ್ತರಾದ ಶ್ರುತಿ ಎನ್.ಎಸ್. ಮತ್ತು ರವೀಶ್ ಹಾಗೂ ಧಾರವಾಡ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡ ಅವರ ಮಾರ್ಗದರ್ಶನದಲ್ಲಿ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ಕೆ. ಬಸಾಪುರ ಮತ್ತು ಅಪರಾಧ ಪತ್ತೆ ದಳದ ಪಿಐ ರಮೇಶ್ ಯಲ್ಲಪ್ಪ ಕಂಬಳೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಬಂಧಿತರನ್ನು ಧಾರವಾಡದ ನಿರ್ಮಲನಗರದ ಗುರುರಾಜ (24), ಹುಬ್ಬಳ್ಳಿಯ ವಿದ್ಯಾನಗರದ ಶಿವಪ್ರಸಾದ್ (26), ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಿಕ್ರಾಂತ್ (30) ಹಾಗೂ ಧಾರವಾಡದ ಸೋಹೇಲ್ ಅಹ್ಮದ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 395 ಗ್ರಾಂ ಗಾಂಜಾ, ₹1,500 ನಗದು, ಒಂದು ತೂಕದ ಯಂತ್ರ ಹಾಗೂ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ ₹4,500 ಎಂದು ಅಂದಾಜಿಸಲಾಗಿದೆ. ಒಟ್ಟು ವಸ್ತುಗಳ ಪೈಕಿ ಮೊಬೈಲ್ ಫೋನ್ಗಳ ಮೌಲ್ಯ ತಲಾ ₹5,000 ಎಂದು ದಾಖಲಿಸಲಾಗಿದೆ.
ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ್ ಶ್ಲಾಘಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.