
ದಾವಣಗೆರೆ, 27 ನವೆಂಬರ್ (ಹಿ.ಸ.):
ಐದು ರೂಪಾಯಿ ಬೆಲೆಯ ಸ್ನ್ಯಾಕ್ಸ್ ಪ್ಯಾಕೆಟ್ನಲ್ಲಿದ್ದ ಪುಟ್ಟ ಆಟಿಕೆಯನ್ನು ನುಂಗಿ ನಾಲ್ಕು ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ.
ಚನ್ನಗಿರಿಯ ಕೌಸರ್ ಮಸೀದಿ ಸಮೀಪ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಕಟ್ಟಡ ಕಾರ್ಮಿಕ ಜಮೀರ್ ಅವರ ನಾಲ್ಕು ವರ್ಷದ ಪುತ್ರಿ ಅಲಿಝಾ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.
ತಾಯಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಅಲಿಝಾ ಐದು ರೂಪಾಯಿ ಬೆಲೆಯ 'ಮೋಟು ಪತ್ಲು' ಹೆಸರಿನ ಸ್ನ್ಯಾಕ್ಸ್ ಪ್ಯಾಕೆಟ್ ತೆಗೆದುಕೊಂಡು ತಿನ್ನುತ್ತಿದ್ದಳು.
ಈ ವೇಳೆ ಪ್ಯಾಕೆಟ್ನಲ್ಲಿದ್ದ ಚಿಕ್ಕ ಆಟಿಕೆಯನ್ನು ಮಗು ಆಕಸ್ಮಿಕವಾಗಿ ನುಂಗಿದೆ ಎನ್ನಲಾಗಿದೆ. ಆಟಿಕೆ ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಉಸಿರಾಟಕ್ಕೆ ತೊಂದರೆಯಾಗಿ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ತಾಯಿಗೆ ವಿಷಯ ತಿಳಿಯುವಷ್ಟರಲ್ಲಿ ಮಗು ಮೃತಪಟ್ಟಿತ್ತು. ಬಳಿಕ ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಆಟಿಕೆಯನ್ನು ತಾಯಿ ಹೊರತೆಗೆದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಪ್ರಾಣ ಕಳೆದುಕೊಂಡಿತ್ತು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೋಷಕರು ಯಾವುದೇ ದೂರು ದಾಖಲಿಸದೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸ್ನ್ಯಾಕ್ಸ್ ಪ್ಯಾಕೆಟ್ನಲ್ಲಿದ್ದ ಆಟಿಕೆ ನುಂಗಿ ಮಗು ಮೃತಪಟ್ಟಿರುವ ಕುರಿತು ಎಚ್ಚರಿಕೆ ಸಂದೇಶಗಳು ಹರಿದಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R