ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ವಿಳಂಬದ ಆತಂಕ: ಸಂತೋಷ ನರಗುಂದ
ಹುಬ್ಬಳ್ಳಿ, 27 ನವೆಂಬರ್ (ಹಿ.ಸ.): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾಯಿತ ಪರಿಷತ್ತಿನ ಅವಧಿ 2027ರ ಮೇ 28ರಂದು ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ಚುನಾವಣೆ ನಡೆಸುವ ಕುರಿತು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಯಾವುದೇ ಅಗತ್ಯ ಸಿದ್ಧತೆ ಕೈಗೊಂಡಿಲ್ಲ. ಹೀಗಾಗಿ ಪಾಲಿಕೆ ಚುನಾವಣೆ
ಸಂತೋಷ ನರಗುಂದ


ಹುಬ್ಬಳ್ಳಿ, 27 ನವೆಂಬರ್ (ಹಿ.ಸ.):

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾಯಿತ ಪರಿಷತ್ತಿನ ಅವಧಿ 2027ರ ಮೇ 28ರಂದು ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ಚುನಾವಣೆ ನಡೆಸುವ ಕುರಿತು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಯಾವುದೇ ಅಗತ್ಯ ಸಿದ್ಧತೆ ಕೈಗೊಂಡಿಲ್ಲ. ಹೀಗಾಗಿ ಪಾಲಿಕೆ ಚುನಾವಣೆ ಮತ್ತೊಮ್ಮೆ ವಿಳಂಬವಾಗುವ ಆತಂಕ ಎದುರಾಗಿದೆ ಎಂದು ಸಾರ್ವಜನಿಕ ನೀತಿ ಮತ್ತು ಉತ್ತಮ ಆಡಳಿತ ತಜ್ಞ ಸಂತೋಷ ನರಗುಂದ ಹೇಳಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ರಾಜ್ಯ ಚುನಾವಣಾ ಆಯೋಗದಿಂದ ಪಡೆದ ಮಾಹಿತಿಯನ್ನು ಉಲ್ಲೇಖಿಸಿರುವ ಅವರು, ಆಯೋಗವು 2026ರ ಮೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ವಾರ್ಡ್‌ವಾರು ಮೀಸಲಾತಿ ವಿವರಗಳನ್ನು ಕೋರಿದೆ. ಆದರೆ ಆರು ತಿಂಗಳು ಕಳೆದರೂ ಸರ್ಕಾರದಿಂದ ಉತ್ತರ ಬಂದಿಲ್ಲ. ಮೀಸಲಾತಿ ಮಾಹಿತಿ ಕೋರಿರುವುದನ್ನು ಹೊರತುಪಡಿಸಿ ಚುನಾವಣೆಗೆ ಸಂಬಂಧಿಸಿದಂತೆ ಆಯೋಗ ಬೇರೆ ಯಾವುದೇ ಕ್ರಮ ಕೈಗೊಂಡಿರುವುದು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಅಗತ್ಯವಿದೆ ಎಂಬುದು ಚುನಾವಣಾ ಆಯೋಗದ ನಿಲುವಾಗಿದೆ. ವಾರ್ಡ್ ವಿಂಗಡಣೆ, ಮೀಸಲಾತಿ ನಿಗದಿ ಹಾಗೂ ಮತದಾರರ ಪಟ್ಟಿ ಸಿದ್ಧಪಡಿಸುವುದು ಚುನಾವಣಾ ಪೂರ್ವಸಿದ್ಧತೆಯ ಪ್ರಮುಖ ಹಂತಗಳಾಗಿವೆ. ಈ ಪ್ರಕ್ರಿಯೆಗಳಲ್ಲಿ ವಿಳಂಬವಾದರೆ ಸಕಾಲದಲ್ಲಿ ಚುನಾವಣೆ ನಡೆಸುವುದು ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಕೂಡ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ 30 ತಿಂಗಳಿಗೂ ಹೆಚ್ಚು ವಿಳಂಬವಾಗಿತ್ತು. 2021ರ ಸೆಪ್ಟೆಂಬರ್‌ನಲ್ಲಿ ಫಲಿತಾಂಶ ಪ್ರಕಟವಾದ ಬಳಿಕ ಚುನಾಯಿತ ಸದಸ್ಯರ ಪ್ರಮಾಣವಚನ ಮತ್ತು ಪರಿಷತ್ತಿನ ಮೊದಲ ಸಭೆ ನಡೆಸಲು ಎಂಟು ತಿಂಗಳು ವಿಳಂಬವಾಗಿತ್ತು. ಇದರಿಂದ ಅವಳಿ ನಗರದ ಜನರು ಮೂರು ವರ್ಷಕ್ಕೂ ಹೆಚ್ಚು ಕಾಲ ಚುನಾಯಿತ ಸ್ಥಳೀಯ ಆಡಳಿತದಿಂದ ವಂಚಿತರಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಆರು ವರ್ಷಗಳಿಂದ ಬಾಕಿ ಉಳಿದಿವೆ. ಗ್ರಾಮ ಪಂಚಾಯಿತಿಗಳು ಹಾಗೂ 200ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ವಿಳಂಬವಾಗಿದೆ ಎಂದು ಪ್ರಸ್ತಾಪಿಸಿದ್ದಾರೆ.

ಮತದಾರರ ಪಟ್ಟಿ, ವಾರ್ಡ್ ವಿಂಗಡಣೆ ಮತ್ತು ಮೀಸಲಾತಿಯ ನವೀಕೃತ ಮಾಹಿತಿ ಲಭ್ಯವಾಗದಿದ್ದರೂ ಚುನಾವಣೆ ವಿಳಂಬ ಮಾಡದೆ ಪ್ರಸ್ತುತ ಲಭ್ಯವಿರುವ ಪಟ್ಟಿಗಳ ಆಧಾರದಲ್ಲಿ ಚುನಾವಣೆ ನಡೆಸಲು ಅವಕಾಶವಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹಲವು ಪ್ರಕರಣಗಳಲ್ಲಿ ವ್ಯಾಖ್ಯಾನಿಸಿದೆ ಎಂದು ನರಗುಂದ ಉಲ್ಲೇಖಿಸಿದ್ದಾರೆ.

ಸಂವಿಧಾನದ ಅನುಚ್ಛೇದ 243ZA ಮತ್ತು 243U(3)(a)ರ ಆಶಯದಂತೆ ರಾಜ್ಯ ಚುನಾವಣಾ ಆಯೋಗವು 2027ರ ಮೇ 8ರೊಳಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಸಬೇಕು. ರಾಜ್ಯ ಸರ್ಕಾರವೂ ಅಗತ್ಯ ಮಾಹಿತಿ ಮತ್ತು ಸಹಕಾರ ಒದಗಿಸಿ ಸಕಾಲದಲ್ಲಿ ಚುನಾವಣೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande