
ಬೆಂಗಳೂರು, 27 ನವೆಂಬರ್ (ಹಿ.ಸ.):
ಆಶಾ ಕಾರ್ಯಕರ್ತೆಯರ ಬಗ್ಗೆ ಮಾತನಾಡುವ ನೈತಿಕತೆ ಎನ್ಡಿಎ ನಾಯಕರಿಗಿಲ್ಲ. ಅವರಿಗೆ ಆಶಾ ಕಾರ್ಯಕರ್ತೆಯರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಕೇಂದ್ರ ಸರ್ಕಾರ ನೀಡಬೇಕಿರುವ ಹಣದ ಬಗ್ಗೆ ಧ್ವನಿ ಎತ್ತಲಿ. ಈವರೆಗೂ ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರ ಗೌರವಧನದಲ್ಲಿ ಒಂದು ರೂಪಾಯಿಯನ್ನೂ ಹೆಚ್ಚಿಸಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಂಗೇರಿಯ ಬಿಜಿಎಸ್ ಮೈದಾನದ ಬಳಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಹೋರಾಟ ಮತ್ತು ಎನ್ಡಿಎ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದರು.
ನಾನು ಎನ್ಡಿಎಯ ಯಾವುದೇ ನಾಯಕರ ಹೇಳಿಕೆಗೆ ಉತ್ತರ ನೀಡುವುದಿಲ್ಲ. ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಈವರೆಗೂ ಒಂದು ರೂಪಾಯಿಯನ್ನೂ ಹೆಚ್ಚಿಸಿಲ್ಲ. ಅವರ ಗೌರವಧನ ಹೆಚ್ಚಳ ಮಾಡಿರುವುದು ನಾವು. ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಆಶಾ ಕಾರ್ಯಕರ್ತೆಯರ ಯೋಜನೆಯನ್ನು ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಅವರು. ಆಶಾ ಕಾರ್ಯಕರ್ತೆಯರ ಪರವಾಗಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ಬಿಜೆಪಿಗೆ ಅವರ ಬಗ್ಗೆ ದ್ವೇಷವಿದೆ. ಹೀಗಾಗಿ ನಾನು ಹೆಚ್ಚು ಮಾತನಾಡುತ್ತಿಲ್ಲ ಎಂದರು.
ಸಹಿ ಹಾಕಲೇಬೇಕು ಎಂದು ಪಟ್ಟು ಹಿಡಿದರೆ ಸಾಧ್ಯವಿಲ್ಲ
ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚೆ ನಡೆಸುವ ಕುರಿತು ಮಾತನಾಡಿದ ಅವರು, ನಿಮ್ಮ ಮೇಲೆ ನಮಗೆ ನಂಬಿಕೆ ಇದೆ. ನಮಗೆ ಅವಕಾಶ ಕೊಟ್ಟರೆ ನಾವು ಹೋಗಿ ನಮ್ಮ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಅನೇಕ ಆಶಾ ಕಾರ್ಯಕರ್ತೆಯರು ಕರೆ ಹಾಗೂ ಸಂದೇಶಗಳ ಮೂಲಕ ನನಗೆ ತಿಳಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಲ್ಲೇ ಬಿರುಕು ಮೂಡಬಾರದು ಎಂಬ ಉದ್ದೇಶದಿಂದ ನಾನೂ ಮೌನವಾಗಿದ್ದೇನೆ.
ನಿಮ್ಮ ಕಷ್ಟಗಳ ಬಗ್ಗೆ ನಮಗೆ ಅರಿವಿದೆ. ನೀವು ನಿಮ್ಮ ಕೆಲಸದಲ್ಲಿ ನಿರತರಾಗಿ. ನೀವು ಸೇವೆಯ ಉದ್ದೇಶದಿಂದ ಬಂದಿದ್ದೀರಿ, ಹೋರಾಟಕ್ಕಲ್ಲ. ಹೋರಾಟ ಮಾಡುವುದು ಎಲ್ಲರ ಹಕ್ಕು. ನಿಮ್ಮೊಂದಿಗೆ ಚರ್ಚೆ ನಡೆಸುತ್ತೇನೆ. ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಅವರು ನಿಮ್ಮೊಂದಿಗೆ ಏನು ಮಾತನಾಡಿದ್ದಾರೆ ಎಂಬ ಅರಿವು ನನಗಿದೆ. ಆದರೆ ಸಹಿ ಹಾಕಲೇಬೇಕು ಎಂದು ಪಟ್ಟು ಹಿಡಿದರೆ ಅದು ಸಾಧ್ಯವಿಲ್ಲ. ನನ್ನ ಮೇಲೆ ವಿಶ್ವಾಸ ಇಟ್ಟರೆ ಖಂಡಿತವಾಗಿಯೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಆಶಾ ಕಾರ್ಯಕರ್ತೆಯರು ನಮ್ಮ ಸಹೋದರಿಯರು
ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣ ಮಾಡುವವರು ಮಾಡಲಿ. ಅದಕ್ಕೆ ನನ್ನ ಅಭ್ಯಂತರವಿಲ್ಲ. ನನಗೆ ಈ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಆಶಾ ಕಾರ್ಯಕರ್ತೆಯರು ನಮ್ಮ ಸಹೋದರಿಯರು. ಅವರ ಹಿತದ ಬಗ್ಗೆ ನಮಗೆ ಕಾಳಜಿ ಇದೆ. ಪ್ರತಿಭಟನೆಯನ್ನು ಕೈಬಿಡುವಂತೆ ಮತ್ತೊಮ್ಮೆ ವಿನಯದಿಂದ ಮನವಿ ಮಾಡುತ್ತೇನೆ. ಎಲ್ಲರನ್ನೂ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.
ನಾವು ನುಡಿದಂತೆ ನಡೆಯುತ್ತೇವೆ
ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಭರವಸೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಹೌದು, ನಾವು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇವೆ. ನಾವು ನುಡಿದಂತೆ ನಡೆಯುತ್ತೇವೆ. ಕೇಂದ್ರ ಸರ್ಕಾರ ತನ್ನ ಪಾಲಿನ ಮೊತ್ತವನ್ನು ಹೆಚ್ಚಿಸುವಂತೆ ಅವರು ಒತ್ತಡ ಹೇರಲಿ ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.