
ನವದೆಹಲಿ, 26 ನವೆಂಬರ್ (ಹಿ.ಸ.):
ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುವ ಕುರಿತು ಅನಿಶ್ಚಿತತೆ ಮುಂದುವರಿದಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಎರಡು-ಮೂರು ದಿನಗಳ ಅಲ್ಪಾವಧಿ ಅಧಿವೇಶನ ನಡೆಸುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಡಿಸೆಂಬರ್ 1 ಮತ್ತು 2ರ ನಂತರ ಮುಂಗಾರು ಅಧಿವೇಶನವನ್ನು ಇನ್ನೂ ಎರಡು-ಮೂರು ದಿನಗಳ ಕಾಲ ವಿಸ್ತರಿಸಿ ಕಲಾಪ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಸೀಮಿತ ಸಮಯ ಹಾಗೂ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಪೂರ್ಣ ಪ್ರಮಾಣದ ಚಳಿಗಾಲದ ಅಧಿವೇಶನ ನಡೆಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 3ರಿಂದ 5ರವರೆಗೆ ಅಥವಾ ಡಿಸೆಂಬರ್ 6ರಂದು ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ ಕುರಿತು ಈ ಹಿಂದೆ ಚರ್ಚೆಗಳು ನಡೆದಿದ್ದವು. ಆದರೆ, ಪೂರ್ಣ ಪ್ರಮಾಣದ ಚಳಿಗಾಲದ ಅಧಿವೇಶನಕ್ಕೆ ಸಾಮಾನ್ಯವಾಗಿ ಕನಿಷ್ಠ 14 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕಾಗುತ್ತದೆ. ಹೀಗಾಗಿ, ಕಡಿಮೆ ಅವಧಿಯ ವಿಶೇಷ ಕಲಾಪ ನಡೆಸುವ ಆಯ್ಕೆಗೆ ಸರ್ಕಾರ ಒಲವು ತೋರಬಹುದು ಎನ್ನಲಾಗಿದೆ.
ಎರಡು ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆಯುವ ಗುರಿ
ಸಂಭಾವ್ಯ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ, 2026 ಹಾಗೂ ಸಂವಿಧಾನದ 131ನೇ ತಿದ್ದುಪಡಿ ಮಸೂದೆ, 2026ಕ್ಕೆ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಕ್ಷೇತ್ರ ಮರುವಿಂಗಡಣೆ ಮೂಲಕ ಶೇ.33ರಷ್ಟು ಮೀಸಲಾತಿ ಕಲ್ಪಿಸುವುದು ಸಂವಿಧಾನ ತಿದ್ದುಪಡಿ ಮಸೂದೆಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ 543 ಸದಸ್ಯ ಬಲದ ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರ ಪಡೆಯಲು ಮೂರನೇ ಎರಡರಷ್ಟು ಬಹುಮತ ಅಗತ್ಯವಿದೆ. ಅಂದರೆ, 361 ಸದಸ್ಯರ ಬೆಂಬಲ ಪಡೆಯಬೇಕಾಗುತ್ತದೆ. ಹೀಗಾಗಿ, ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅಗತ್ಯ ಸಂಖ್ಯಾಬಲ ಹೊಂದಿಸುವುದು ಸರ್ಕಾರದ ಮುಂದಿರುವ ಪ್ರಮುಖ ಸವಾಲಾಗಿದೆ.
ನಿಯಮ 15ರಡಿ ವಿಶೇಷ ಅಧಿವೇಶನಕ್ಕೆ ಅವಕಾಶ
ಕಡಿಮೆ ಮುಂಚಿತ ಸೂಚನೆಯೊಂದಿಗೆ ಎರಡು-ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲು ಲೋಕಸಭೆಯ ನಿಯಮ 15ರ ಅವಕಾಶ ಬಳಸಿಕೊಳ್ಳಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಲೋಕಸಭೆಯ ನಿಯಮಾವಳಿಗಳ ಪ್ರಕಾರ, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕವೂ ಅಧಿಕೃತವಾಗಿ ಅಧಿವೇಶನವನ್ನು ಮುಕ್ತಾಯಗೊಳಿಸದಿದ್ದರೆ, ಸ್ಪೀಕರ್ ಯಾವುದೇ ಸಮಯದಲ್ಲಿ ಸದನದ ಸಭೆ ಕರೆಯಬಹುದು. ಉಭಯ ಸದನಗಳನ್ನು ಆಗಸ್ಟ್ 13ರಂದು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R