
ನವದೆಹಲಿ, 26 ನವೆಂಬರ್ (ಹಿ.ಸ.):
ಭಾರತೀಯ ಪ್ರಜಾಪ್ರಭುತ್ವದ ಅಮೂಲ್ಯ ಪರಂಪರೆಯಾಗಿರುವ ಸಂವಿಧಾನವು ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳಿಸಲು ಸದಾ ಮಾರ್ಗದರ್ಶನ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂವಿಧಾನ ದಿನದ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿರುವ ಅವರು, ಸಂವಿಧಾನ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ಸಭೆಯ ಎಲ್ಲ ಮಹನೀಯರನ್ನು ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಎಲ್ಲಾ ದೇಶವಾಸಿಗಳಿಗೆ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಸಂದರ್ಭದಲ್ಲಿ ಪೂಜ್ಯ ಬಾಬಾಸಾಹೇಬ್ ಹಾಗೂ ಸಂವಿಧಾನ ಸಭೆಯ ಎಲ್ಲಾ ಮಹಾನ್ ವ್ಯಕ್ತಿಗಳಿಗೆ ನನ್ನ ಗೌರವಪೂರ್ವಕ ನಮನಗಳು ಎಂದು ತಿಳಿಸಿದ್ದಾರೆ.
ಸಂವಿಧಾನದ ರೂಪದಲ್ಲಿ ಅವರು ನಮಗೆ ನೀಡಿರುವ ಕೊಡುಗೆ ಭಾರತೀಯ ಪ್ರಜಾಪ್ರಭುತ್ವದ ಅಮೂಲ್ಯ ಪರಂಪರೆಯಾಗಿದೆ. ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಸಂವಿಧಾನ ನಮಗೆ ಸದಾ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದ್ದಾರೆ.
ಸಂವಿಧಾನ ದಿನವು ಸಂವಿಧಾನ ಶಿಲ್ಪಿಗಳ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ, ಸಂವಿಧಾನದಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ಕೈಗೊಳ್ಳುವ ದಿನವಾಗಿದೆ ಎಂದು ಪ್ರಧಾನಿ ಒತ್ತಿಹೇಳಿದ್ದಾರೆ.
1949ರ ನವೆಂಬರ್ 26ರಂದು ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತ್ತು. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದಿತು. 2015ರಿಂದ ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಂವಿಧಾನದ ಆಶಯಗಳು, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R