
ನವದೆಹಲಿ, 26 ನವೆಂಬರ್ (ಹಿ.ಸ.):
ಭಾರತದ ಆಮದು ಸರಕುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವ ಅಮೆರಿಕದ ಪ್ರಸ್ತಾವನೆಗೆ ಭಾರತ ವಿರೋಧ ವ್ಯಕ್ತಪಡಿಸಿದೆ. ಭಾರತದ ಉತ್ಪಾದನಾ ವಲಯದಲ್ಲಿ ರಚನಾತ್ಮಕವಾಗಿ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವಿದೆ ಎಂಬ ಅಮೆರಿಕದ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಇದೇ ವೇಳೆ, ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಶೀಘ್ರ ಅಂತಿಮಗೊಳಿಸಲು ಭಾರತ ಬದ್ಧವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಅಮೆರಿಕವು ಭಾರತದ ಆಮದುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವ ಪ್ರಸ್ತಾವನೆ ಮುಂದಿಟ್ಟಿದೆ. ಆದರೆ, ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದರೆ ಸುಂಕವನ್ನು ಶೇ.17ಕ್ಕೆ ಇಳಿಸುವ ಅವಕಾಶವನ್ನೂ ನೀಡಿದೆ. ಇದರಿಂದ ಏಷ್ಯಾದ ಇತರ ಸ್ಪರ್ಧಿ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತಕ್ಕೆ ತುಸು ಅನುಕೂಲವಾಗುವ ಸಾಧ್ಯತೆಯಿದೆ.
ಚೀನಾ, ಯುರೋಪಿಯನ್ ಒಕ್ಕೂಟ, ಸಿಂಗಾಪುರ, ಸ್ವಿಟ್ಜರ್ಲೆಂಡ್, ಇಂಡೋನೇಷ್ಯಾ, ಮಲೇಷ್ಯಾ, ಕಾಂಬೋಡಿಯಾ, ಥಾಯ್ಲೆಂಡ್, ದಕ್ಷಿಣ ಕೊರಿಯಾ, ವಿಯೆಟ್ನಾಂ, ತೈವಾನ್, ಬಾಂಗ್ಲಾದೇಶ, ಜಪಾನ್, ನಾರ್ವೆ ಮತ್ತು ಮೆಕ್ಸಿಕೊ ಸೇರಿದಂತೆ ಪ್ರಮುಖ ಆರ್ಥಿಕತೆಗಳ ಉತ್ಪಾದನಾ ವಲಯಗಳ ಕುರಿತು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ ತನಿಖೆ ನಡೆಸಿದೆ. ಉತ್ಪಾದನಾ ವಲಯಗಳಲ್ಲಿ ರಚನಾತ್ಮಕ ಹೆಚ್ಚುವರಿ ಸಾಮರ್ಥ್ಯ ಮತ್ತು ಉತ್ಪಾದನೆಗೆ ಸಂಬಂಧಿಸಿದಂತೆ ಈ ತನಿಖೆ ಕೈಗೊಳ್ಳಲಾಗಿದೆ.
ಭಾರತದ ಉತ್ಪಾದನಾ ಸಾಮರ್ಥ್ಯದ ಬಗ್ಗೆ ಸ್ಪಷ್ಟನೆ
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ವಾಣಿಜ್ಯ ಸಚಿವಾಲಯ, ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯು ಸೆಕ್ಷನ್ 301ರ ಅಡಿಯಲ್ಲಿ ನಡೆಸುತ್ತಿರುವ ತನಿಖೆಗೆ ಸಂಬಂಧಿಸಿದ ನಿರ್ಧಾರದ ಪ್ರಕಟಣೆ ಹಾಗೂ ಅಭಿಪ್ರಾಯ ಆಹ್ವಾನದ ಸೂಚನೆಯನ್ನು ಗಮನಿಸಿರುವುದಾಗಿ ತಿಳಿಸಿದೆ.
ತನಿಖೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಭಾರತ ರಚನಾತ್ಮಕವಾಗಿ ಸಹಕರಿಸಿದೆ. ತನಿಖೆ ಆರಂಭಿಸುವ ಕುರಿತು ಅಮೆರಿಕ ನೀಡಿದ್ದ ಸೂಚನೆಗೆ ಪ್ರತಿಕ್ರಿಯೆಯಾಗಿ ಹಾಗೂ ನಂತರ ನಡೆದ ವಿಚಾರಣೆಗಳಲ್ಲಿಯೂ ಭಾರತದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ದೇಶದ ಯಾವುದೇ ಉತ್ಪಾದನಾ ವಲಯದಲ್ಲೂ ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಇಲ್ಲ ಎಂದು ಸಚಿವಾಲಯ ಹೇಳಿದೆ.
ಭಾರತ ಮತ್ತು ಅಮೆರಿಕ ಈಗಾಗಲೇ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳಲ್ಲಿ ತೊಡಗಿಸಿಕೊಂಡಿವೆ. ಎರಡೂ ದೇಶಗಳ ನಡುವಿನ ವ್ಯಾಪಾರಕ್ಕೆ ಸಂಬಂಧಿಸಿದ ಆತಂಕಗಳು ಮತ್ತು ಸಮಸ್ಯೆಗಳನ್ನು ಮಾತುಕತೆಯ ಮೂಲಕವೇ ಪರಿಹರಿಸಬೇಕು ಎಂಬುದು ಭಾರತದ ನಿಲುವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಟ್ರಂಪ್ ಸುಂಕ ನೀತಿಗೆ ಜಿಟಿಆರ್ಐ ಟೀಕೆ
ಅಮೆರಿಕದ ಹೊಸ ಸುಂಕ ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿರುವ ಜಾಗತಿಕ ವ್ಯಾಪಾರ ಸಂಶೋಧನಾ ಉಪಕ್ರಮ (ಜಿಟಿಆರ್ಐ), ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಹೊಸ ಸೆಕ್ಷನ್ 301ರ ಸುಂಕಗಳು ಪರಸ್ಪರ ಸುಂಕದ ವ್ಯವಸ್ಥೆಯನ್ನೇ ಹೊಸ ಹೆಸರಿನಲ್ಲಿ ಮರುಸ್ಥಾಪಿಸುವ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ನೈಜ ಕೈಗಾರಿಕಾ ಉತ್ಪಾದನೆಯಲ್ಲಿನ ಹೆಚ್ಚುವರಿ ಸಾಮರ್ಥ್ಯವನ್ನು ಪರಿಹರಿಸುವ ಬದಲು, ವ್ಯಾಪಾರ ಪಾಲುದಾರ ರಾಷ್ಟ್ರಗಳು ಏಕಪಕ್ಷೀಯ ಹಾಗೂ ದುಬಾರಿ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವಂತೆ ಒತ್ತಡ ಹೇರುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ ಎಂದು ಜಿಟಿಆರ್ಐ ಟೀಕಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R