ಭೋವಿ ಸಮುದಾಯದ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ತಲುಪಿಸುವಲ್ಲಿ ವಿಳಂಬ ಬೇಡ: ಎಂ. ರಾಮಪ್ಪ
ಬಳ್ಳಾರಿ, 20 ನವೆಂಬರ್ (ಹಿ.ಸ.) ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಸಮುದಾಯದ ಫಲಾನುಭವಿಗಳಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳು ಮತ್ತು ಯೋಜನೆಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ವಿಳಂಬ ತೋರುವಂತಿಲ್ಲ. ಅರ್ಜಿಗಳ ವಿಲೇವಾರಿಯಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರು
ಭೋವಿ ನಿಗಮದ ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಳಂಬ ತೋರುವಂತಿಲ್ಲ: ಎಂ. ರಾಮಪ್ಪ


ಭೋವಿ ನಿಗಮದ ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಳಂಬ ತೋರುವಂತಿಲ್ಲ: ಎಂ. ರಾಮಪ್ಪ


ಬಳ್ಳಾರಿ, 20 ನವೆಂಬರ್ (ಹಿ.ಸ.)

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಸಮುದಾಯದ ಫಲಾನುಭವಿಗಳಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳು ಮತ್ತು ಯೋಜನೆಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ವಿಳಂಬ ತೋರುವಂತಿಲ್ಲ. ಅರ್ಜಿಗಳ ವಿಲೇವಾರಿಯಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಿಗಮದ ಅಧ್ಯಕ್ಷ ಎಂ. ರಾಮಪ್ಪ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭೋವಿ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ, ಸ್ವಯಂ ಉದ್ಯೋಗ ಯೋಜನೆಗಳು ಹಾಗೂ ವಿವಿಧ ಸಹಾಯಧನಗಳು ಸಕಾಲದಲ್ಲಿ ದೊರೆಯಬೇಕು. ಅರ್ಜಿಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಮಾಡದೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಬಡವರು ಮತ್ತು ಹಿಂದುಳಿದ ವರ್ಗದವರಿಗಾಗಿ ಸರ್ಕಾರ ರೂಪಿಸಿರುವ ಸಾಲ ಹಾಗೂ ಸ್ವಯಂ ಉದ್ಯೋಗ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಬ್ಯಾಂಕ್‌ಗಳ ಸಹಕಾರ ಅತ್ಯಗತ್ಯ. ಲೀಡ್ ಬ್ಯಾಂಕ್ ಸೇರಿದಂತೆ ಇತರ ಬ್ಯಾಂಕ್‌ಗಳು ನಿಯಮಗಳನ್ನು ಸಡಿಲಿಸಿ ಮಾನವೀಯ ದೃಷ್ಟಿಯಿಂದ ಅರ್ಹ ಫಲಾನುಭವಿಗಳಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಸಣ್ಣ ಮೊತ್ತದ ಸಾಲ ಹಾಗೂ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೂ ಕಠಿಣ ಸಾಲ ಅರ್ಹತಾ ನಿಯಮಗಳನ್ನು ಅನ್ವಯಿಸುತ್ತಿರುವುದರಿಂದ ಬಡವರಿಗೆ ತೊಂದರೆಯಾಗುತ್ತಿದೆ ಎಂದು ಸಮುದಾಯದ ಮುಖಂಡರು ಸಭೆಯಲ್ಲಿ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಿರೀಶ್ ಕುಲಕರ್ಣಿ, ನಿಯಮಗಳ ಕುರಿತು ಸ್ಪಷ್ಟನೆ ಪಡೆಯಲು ಹಾಗೂ ಅಗತ್ಯ ಸಡಿಲಿಕೆ ಕುರಿತು ಮುಂದಿನ ಸಭೆಗಳಲ್ಲಿ ಮತ್ತು ಬ್ಯಾಂಕ್ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.

ಸಾಲ ಸೌಲಭ್ಯಕ್ಕೆ ಸಂಬಂಧಿಸಿದ ಕೆಲವು ಅರ್ಜಿಗಳು ಮತ್ತು ಪ್ರಸ್ತಾವನೆಗಳು ತಡವಾಗಿ ಬಂದಿವೆ. ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಮಾಹಿತಿ ರವಾನಿಸಲಾಗಿದೆ. ಮುಂಬರುವ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿ ಸಭೆಯಲ್ಲಿ ಫಲಾನುಭವಿಗಳು ಮತ್ತು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಸಮುದಾಯದ ನಿಖರ ಜನಸಂಖ್ಯೆ ಗುರುತಿಸಲು ಸೂಚನೆ

2011ರ ಜನಗಣತಿಯಲ್ಲಿ ಜಿಲ್ಲೆಯಲ್ಲಿ ಭೋವಿ ಸಮುದಾಯದ ಜನಸಂಖ್ಯೆ ಕಡಿಮೆ ದಾಖಲಾಗಿದ್ದು, ವಾಸ್ತವ ಸಂಖ್ಯೆಗೆ ವ್ಯತ್ಯಾಸವಿದೆ. ಆದ್ದರಿಂದ ಪ್ರತಿ ಗ್ರಾಮ ಮತ್ತು ಕಾಲೋನಿಗಳಲ್ಲಿ ವಾಸಿಸುವ ಭೋವಿ ಸಮುದಾಯದವರ ನಿಖರ ಸಂಖ್ಯೆಯನ್ನು ಗುರುತಿಸಬೇಕು. ಈ ಮಾಹಿತಿಯನ್ನು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಹಿ ದೃಢೀಕರಣದೊಂದಿಗೆ ತಹಶೀಲ್ದಾರರಿಗೆ ಸಲ್ಲಿಸುವಂತೆ ಸಮುದಾಯದ ಮುಖಂಡರಿಗೆ ಸಲಹೆ ನೀಡಿದರು.

ಕೂಲಿ ಕೆಲಸಕ್ಕಾಗಿ ವಲಸೆ ಹೋಗುವ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಭೋವಿ ಕಾಲೋನಿಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮತ್ತೆ ಶಾಲೆಗೆ ಸೇರಿಸುವುದರ ಜತೆಗೆ ಅಗತ್ಯ ವಸತಿ ನಿಲಯದ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮತ್ತು ಶಿಕ್ಷಕರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಸಮುದಾಯದವರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ತ್ವರಿತವಾಗಿ ವಿತರಿಸಬೇಕು. ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿದ ಕೂಡಲೇ ಪ್ರಮಾಣಪತ್ರ ನೀಡಬೇಕು. ಈ ವಿಚಾರದಲ್ಲಿ ತಹಶೀಲ್ದಾರರು ನಿರ್ಲಕ್ಷ್ಯ ತೋರಿದರೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು. ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಿ ಅವುಗಳಿಗೆ ಸಾಲ ಸೌಲಭ್ಯ ಒದಗಿಸುವಂತೆಯೂ ಸೂಚಿಸಿದರು.

ಸಿದ್ದರಾಮೇಶ್ವರ ಭವನ ನಿರ್ಮಾಣಕ್ಕೆ 5 ಕೋಟಿ ರೂ.

ಜಿಲ್ಲಾ ಕೇಂದ್ರದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಭವನ ನಿರ್ಮಿಸುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೂಕ್ತ ಜಾಗ ಗುರುತಿಸಿದರೆ ಸುಸಜ್ಜಿತ ಭವನ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುವುದು. ಇದಕ್ಕಾಗಿ 5 ಕೋಟಿ ರೂ. ಒದಗಿಸಲಾಗುವುದು ಎಂದು ಎಂ. ರಾಮಪ್ಪ ತಿಳಿಸಿದರು.

4,679 ಅರ್ಜಿಗಳ ಸಲ್ಲಿಕೆ

ನಿಗಮದ ಜಿಲ್ಲಾ ವ್ಯವಸ್ಥಾಪಕ ಅರುಣ್ ಕುಮಾರ್ ಮಾತನಾಡಿ, 2015–16ನೇ ಸಾಲಿನಲ್ಲಿ ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆಯಾಗಿದ್ದು, 2016ರಿಂದ ಕಾರ್ಯಾರಂಭ ಮಾಡಿದೆ. ಭೋವಿ, ವಡ್ಡ, ವಡ್ಡರ, ಕಲ್ಲು ಒಡ್ಡರು ಹಾಗೂ ಸಂಬಂಧಿತ ಸಮುದಾಯಗಳು ನಿಗಮದ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದರು.

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಭೋವಿ ಸಮುದಾಯದ ಒಟ್ಟು ಜನಸಂಖ್ಯೆ 11.20 ಲಕ್ಷವಿದ್ದು, ಜಿಲ್ಲೆಗಳ ವಿಭಜನೆಗೂ ಮುನ್ನ ಬಳ್ಳಾರಿ ಜಿಲ್ಲೆಯ ಜನಸಂಖ್ಯೆ 65,467 ಇತ್ತು. ಪ್ರಸ್ತುತ ಬಳ್ಳಾರಿ ಜಿಲ್ಲಾ ಕಚೇರಿ ಸೇರಿದಂತೆ 11 ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿಗಮದ ಆಡಳಿತಾತ್ಮಕ ಕಾರ್ಯಗಳು ನಡೆಯುತ್ತಿವೆ ಎಂದರು.

ನಿಗಮದ ವತಿಯಿಂದ ಸ್ವಯಂ ಉದ್ಯೋಗ, ಕುರಿ ಮತ್ತು ಮೇಕೆ ಸಾಕಾಣಿಕೆ, ಉದ್ಯಮಶೀಲತಾ ಯೋಜನೆಯಡಿ ಟ್ಯಾಕ್ಸಿ, ಆಹಾರ ಸಾಗಣೆ ವಾಹನ ಹಾಗೂ ತ್ರಿಚಕ್ರ ವಾಹನ ಸೌಲಭ್ಯ, ಕಿರುಸಾಲ ಮತ್ತು ಮಹಿಳಾ ಗುಂಪುಗಳ ಯೋಜನೆ, ಗಂಗಾ ಕಲ್ಯಾಣ ಹಾಗೂ ಭೂ ಒಡೆತನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

2022–23ರಿಂದ 2025–26ನೇ ಸಾಲಿನವರೆಗೆ ಅಂತರ್ಜಾಲದ ಮೂಲಕ ಒಟ್ಟು 4,679 ಅರ್ಜಿಗಳು ಸಲ್ಲಿಕೆಯಾಗಿವೆ. ಕೆಲವು ಯೋಜನೆಗಳಲ್ಲಿ ನಿಗದಿತ ಗುರಿ ಸಾಧನೆಯಾಗಿದ್ದರೆ, ಫಲಾನುಭವಿಗಳ ಆಯ್ಕೆ ಪಟ್ಟಿ ಹಾಗೂ ಬ್ಯಾಂಕ್ ಹಂತದಲ್ಲಿ ಕೆಲವು ಪ್ರಕರಣಗಳು ಬಾಕಿ ಉಳಿದಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಭೋವಿ ಸಮುದಾಯದ ಮುಖಂಡರು ವಿವಿಧ ಕುಂದುಕೊರತೆಗಳನ್ನು ಪ್ರಸ್ತಾಪಿಸಿದರು. ಅವುಗಳನ್ನು ಸಕಾಲದಲ್ಲಿ ಇತ್ಯರ್ಥಪಡಿಸುವಂತೆ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸುಮಾ, ಕೇಂದ್ರ ಕಚೇರಿಯ ಪ್ರಧಾನ ವ್ಯವಸ್ಥಾಪಕ ಶಿವಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಬಳ್ಳಾರಿ ನಗರ ಉಪ ಪೊಲೀಸ್ ಅಧೀಕ್ಷಕ ಗೋವಿಂದರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮುದಾಯದ ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande