
ಡೆಹ್ರಾಡೂನ್, 20 ನವೆಂಬರ್ (ಹಿ.ಸ.):
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ (89) ಅವರು ಶುಕ್ರವಾರ ನಿಧನರಾಗಿದ್ದಾರೆ. ಉತ್ತರಾಖಂಡದ ಪೌರಿ ಗಢವಾಲ್ ಜಿಲ್ಲೆಯ ಯಮಕೇಶ್ವರ ಬ್ಲಾಕ್ನ ಪಂಚೂರ್ ಗ್ರಾಮದ ತಮ್ಮ ಸ್ವಂತ ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಶನಿವಾರ ಹರಿದ್ವಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಯೋಗಿ ಆದಿತ್ಯನಾಥ್ ಅವರು ಈ ವರ್ಷದ ಮೇ ತಿಂಗಳಲ್ಲಿ ತಮ್ಮ ತಾಯಿಯನ್ನು ಕೊನೆಯ ಬಾರಿ ಭೇಟಿಯಾಗಿದ್ದರು. ಮೇ 7ರಂದು ಎರಡು ದಿನಗಳ ಉತ್ತರಾಖಂಡ ಪ್ರವಾಸದ ಸಂದರ್ಭದಲ್ಲಿ ತಮ್ಮ ಸ್ವಗ್ರಾಮ ಪಂಚೂರ್ಗೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದರು.
ಮೇ 8ರಂದು ವಿವಿಧ ಕಾರ್ಯಕ್ರಮಗಳನ್ನು ಮುಗಿಸಿದ ಬಳಿಕ ಸ್ವಗ್ರಾಮದಲ್ಲಿರುವ ತಮ್ಮ ಮನೆಗೆ ತೆರಳಿದ್ದ ಯೋಗಿ ಆದಿತ್ಯನಾಥ್ ಅವರು ತಾಯಿ ಸಾವಿತ್ರಿ ದೇವಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ತಾಯಿ ಮತ್ತು ಮಗನ ನಡುವಿನ ಈ ಭೇಟಿಯೇ ಕೊನೆಯ ಭೇಟಿಯಾಗಿದೆ.
ಸಾವಿತ್ರಿ ದೇವಿ ಅವರ ನಿಧನಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶೋಕ ಸಂದೇಶ ಪ್ರಕಟಿಸಿರುವ ಅವರು, ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ ನಿಧನದ ಸುದ್ದಿ ಅತ್ಯಂತ ದುಃಖದಾಯಕವಾಗಿದೆ. ತಾಯಿಯ ಪ್ರೀತಿ, ಆಶೀರ್ವಾದ ಮತ್ತು ವಾತ್ಸಲ್ಯ ಜೀವನದ ಅತ್ಯಂತ ಅಮೂಲ್ಯ ಆಸ್ತಿಗಳಾಗಿವೆ. ಅವರ ನಿಧನ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.
ತಾಯಿಯ ಸ್ಥಾನ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಅವರ ಪ್ರೀತಿ ಮತ್ತು ಆಶೀರ್ವಾದ ವ್ಯಕ್ತಿಗೆ ಜೀವನದುದ್ದಕ್ಕೂ ಶಕ್ತಿ ನೀಡುತ್ತದೆ. ಇಂತಹ ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಳ್ಳುವುದು ಕುಟುಂಬಕ್ಕೆ ಅಪಾರ ನೋವುಂಟುಮಾಡುತ್ತದೆ. ದುಃಖದ ಈ ಸಮಯದಲ್ಲಿ ಯೋಗಿ ಆದಿತ್ಯನಾಥ್ ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರಿಗೆ ನನ್ನ ತೀವ್ರ ಸಂತಾಪಗಳು ಎಂದು ತಿಳಿಸಿದ್ದಾರೆ.
ದಿವಂಗತ ಸಾವಿತ್ರಿ ದೇವಿ ಅವರ ಆತ್ಮಕ್ಕೆ ಶ್ರೀಕೇದಾರನಾಥ ಸ್ವಾಮಿಯ ಪಾದಗಳಲ್ಲಿ ಸ್ಥಾನ ದೊರೆಯಲಿ ಹಾಗೂ ಯೋಗಿ ಆದಿತ್ಯನಾಥ್ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರುವುದಾಗಿ ಧಾಮಿ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಅವರ ಸ್ವಗ್ರಾಮ ಪಂಚೂರ್ ಉತ್ತರಾಖಂಡದ ಪೌರಿ ಗಢವಾಲ್ ಜಿಲ್ಲೆಯ ಯಮಕೇಶ್ವರ ಪ್ರದೇಶದಲ್ಲಿದೆ. ಸಾವಿತ್ರಿ ದೇವಿ ಅವರ ನಿಧನದಿಂದ ಅವರ ಸ್ವಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಕದ ವಾತಾವರಣ ಆವರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.