
ನವದೆಹಲಿ, 20 ನವೆಂಬರ್ (ಹಿ.ಸ.):
ವಿಶ್ವ ಶೌಚಾಲಯ ದಿನದ ಅಂಗವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳ ಕಾರ್ಯಕ್ಷಮತೆ ಹಾಗೂ ಬಳಕೆಯ ಅನುಕೂಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಜಲಶಕ್ತಿ ಸಚಿವಾಲಯವು ‘ಸ್ವಚ್ಛ ಶೌಚಾಲಯ–ಗೌರವಯುತ ಭವಿಷ್ಯ’ ಅಭಿಯಾನವನ್ನು ಆರಂಭಿಸಿದೆ.
ಸ್ವಚ್ಛ ಭಾರತ ಅಭಿಯಾನದ (ಗ್ರಾಮೀಣ) ಅಡಿಯಲ್ಲಿ ನವೆಂಬರ್ 19ರಿಂದ ಆರಂಭವಾಗಿರುವ ಈ ರಾಷ್ಟ್ರವ್ಯಾಪಿ ಅಭಿಯಾನ 2026ರ ಡಿಸೆಂಬರ್ 10ರವರೆಗೆ ನಡೆಯಲಿದೆ. ಮಾನವ ಹಕ್ಕುಗಳ ದಿನದಂದು ಅಭಿಯಾನ ಮುಕ್ತಾಯಗೊಳ್ಳಲಿದೆ.
ಕೇಂದ್ರ ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ)ದ ರಾಷ್ಟ್ರೀಯ ಮಿಷನ್ ನಿರ್ದೇಶಕಿ ಐಶ್ವರ್ಯಾ ಸಿಂಗ್ ಅವರು ನವೆಂಬರ್ 19ರಂದು ಅಭಿಯಾನ ಮತ್ತು ಅದರ ಪ್ರಗತಿ ವರದಿ ಸಲ್ಲಿಕೆ ವ್ಯವಸ್ಥೆಗೆ ಚಾಲನೆ ನೀಡಿದರು. ಈ ವ್ಯವಸ್ಥೆಯ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಭಿಯಾನದ ಪ್ರಗತಿಯ ಮಾಹಿತಿಯನ್ನು ದಾಖಲಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಅಧಿಕಾರಿಗಳು ಸ್ವಚ್ಛ ಭಾರತ ಅಭಿಯಾನದ ಪ್ರಗತಿಯ ವಿವರಗಳನ್ನು ಹಂಚಿಕೊಂಡರು. ದೇಶದ ಸುಮಾರು ಶೇ.89.9ರಷ್ಟು ಗ್ರಾಮಗಳು ಈಗಾಗಲೇ ಬಯಲು ಶೌಚಮುಕ್ತ ಪ್ಲಸ್ (ಮಾದರಿ) ಸ್ಥಾನಮಾನವನ್ನು ಸಾಧಿಸಿವೆ ಎಂದು ತಿಳಿಸಿದರು.
ವಿಶ್ವಸಂಸ್ಥೆಯು 2026ರ ವಿಶ್ವ ಶೌಚಾಲಯ ದಿನದ ಧ್ಯೇಯವಾಕ್ಯವಾಗಿ ‘ಸುರಕ್ಷಿತ ಶೌಚಾಲಯ, ಸಮಾನ ಭವಿಷ್ಯ’ ಎಂಬ ವಿಷಯವನ್ನು ಘೋಷಿಸಿದೆ. ನೈರ್ಮಲ್ಯವನ್ನು ಲಿಂಗ ಸಮಾನತೆಯೊಂದಿಗೆ ಬೆಸೆಯುವ ಉದ್ದೇಶ ಹೊಂದಿರುವ ಈ ಆಶಯದಂತೆ ಅಭಿಯಾನದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ವಿಶೇಷಚೇತನರ ಅಗತ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಅಭಿಯಾನದಡಿ ಗ್ರಾಮಗಳಲ್ಲಿನ ಸಮುದಾಯ ನೈರ್ಮಲ್ಯ ಸಂಕೀರ್ಣಗಳು ಹಾಗೂ ಶಾಲೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಪಂಚಾಯಿತಿ ಕಟ್ಟಡಗಳಲ್ಲಿರುವ ಶೌಚಾಲಯಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಗುತ್ತದೆ. ಅಗತ್ಯವಿರುವ ಕಡೆ ದುರಸ್ತಿ, ನಿರ್ವಹಣೆ ಮತ್ತು ಪುನಶ್ಚೇತನ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ವೈಯಕ್ತಿಕ ಮನೆಗಳಲ್ಲಿರುವ ಶೌಚಾಲಯಗಳ ದುರಸ್ತಿ ಮತ್ತು ನಿರ್ವಹಣೆಗೂ ಕುಟುಂಬಗಳನ್ನು ಪ್ರೇರೇಪಿಸಲಾಗುತ್ತದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಗದಿಪಡಿಸುವ ಗುರಿಗಳಿಗೆ ಅನುಗುಣವಾಗಿ ಸಾಧ್ಯವಿರುವ ಕಡೆ ಏಕ ಗುಂಡಿ ಶೌಚಾಲಯಗಳನ್ನು ದ್ವಿಗುಂಡಿ ಶೌಚಾಲಯಗಳಾಗಿ ಪರಿವರ್ತಿಸುವುದು ಹಾಗೂ ಇಂಗುಗುಂಡಿ ಇಲ್ಲದ ತ್ಯಾಜ್ಯನೀರಿನ ತೊಟ್ಟಿಗಳಿಗೆ ಇಂಗುಗುಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ಇದೆ.
ಮಾನವ ಮಲದ ಕೆಸರು ವಿಲೇವಾರಿಗೆ ಯಂತ್ರೋಪಕರಣಗಳ ಬಳಕೆಯ ಅಗತ್ಯ ಮತ್ತು ವ್ಯವಸ್ಥೆ ಪರಿಶೀಲಿಸುವುದರ ಜೊತೆಗೆ ಸಮುದಾಯ ಹಾಗೂ ಸಾಂಸ್ಥಿಕ ಶೌಚಾಲಯಗಳ ನಿರ್ವಹಣೆಯನ್ನು ಬಲಪಡಿಸಲಾಗುತ್ತದೆ. ಶೌಚಾಲಯಗಳನ್ನು ಸ್ವಚ್ಛವಾಗಿ, ಆಕರ್ಷಕವಾಗಿ ಮತ್ತು ಸುಲಭವಾಗಿ ಬಳಸುವಂತೆ ರೂಪಿಸಲು ಗೋಡೆ ಚಿತ್ರಗಳು, ಸೂಚನಾ ಫಲಕಗಳು ಹಾಗೂ ಸುತ್ತಮುತ್ತಲಿನ ಪರಿಸರದ ಸುಧಾರಣೆಗೆ ಉತ್ತೇಜನ ನೀಡಲಾಗುತ್ತದೆ.
ಗ್ರಾಮಗಳಲ್ಲಿ ಬಯಲು ಶೌಚಮುಕ್ತ ಸ್ಥಿತಿಯನ್ನು ಮುಂದುವರಿಸಲು ಜನರ ನಡವಳಿಕೆಯಲ್ಲಿ ಬದಲಾವಣೆ ತರುವ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ಗ್ರಾಮಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಸ್ವಚ್ಛ ಸೇವಾ ಮೌಲ್ಯಮಾಪನದ ಸ್ಥಿತಿಯನ್ನು ಪರಿಶೀಲಿಸಿ ನವೆಂಬರ್ 30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ವೈಯಕ್ತಿಕ ಮತ್ತು ಸಮುದಾಯ ನೈರ್ಮಲ್ಯ, ಸಾಬೂನಿನಿಂದ ಕೈತೊಳೆಯುವ ಅಭ್ಯಾಸ, ಮಾನವ ಮಲದ ಕೆಸರು ನಿರ್ವಹಣೆ, ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026ರ ಪಾಲನೆ ಹಾಗೂ ತ್ಯಾಜ್ಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಗುಜರಾತ್, ಮಧ್ಯಪ್ರದೇಶ, ಸಿಕ್ಕಿಂ ಮತ್ತು ಕರ್ನಾಟಕದ ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ) ತಂಡಗಳು ತಮ್ಮ ಕಾರ್ಯಯೋಜನೆಗಳನ್ನು ಹಂಚಿಕೊಂಡವು.
ಶಾಲಾ ನಿರ್ವಹಣಾ ಸಮಿತಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಶಾಲೆಗಳಲ್ಲಿ ನೈರ್ಮಲ್ಯ ಪರಿಶೀಲನೆ ನಡೆಸಬೇಕು ಎಂದು ಐಶ್ವರ್ಯಾ ಸಿಂಗ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ತಂಡಗಳಿಗೆ ಕರೆ ನೀಡಿದರು.
ಪ್ರವಾಸಿ ತಾಣಗಳು ಸೇರಿದಂತೆ ಸಾರ್ವಜನಿಕರ ಹೆಚ್ಚಿನ ಓಡಾಟವಿರುವ ಸ್ಥಳಗಳಲ್ಲಿ ಸ್ವಚ್ಛ ಹಾಗೂ ಸುಸ್ಥಿತಿಯಲ್ಲಿರುವ ಸಮುದಾಯ ಶೌಚಾಲಯಗಳ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.
ಶಾಲಾ ಮಕ್ಕಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಅರಿವು ಮೂಡಿಸುವುದರ ಜೊತೆಗೆ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಗೆ ಅಭಿಯಾನದಲ್ಲಿ ಆದ್ಯತೆ ನೀಡಲಾಗುತ್ತದೆ. ಜನರ ಸಹಭಾಗಿತ್ವದ ಮೂಲಕ ಸಂಪೂರ್ಣ ಸ್ವಚ್ಛತೆಯ ಗುರಿ ಸಾಧಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿವಿಧ ವಲಯಗಳ ಸಹಕಾರ ಪಡೆದುಕೊಳ್ಳುವಂತೆ ಸಚಿವಾಲಯ ಮನವಿ ಮಾಡಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.