
ನವದೆಹಲಿ, 20 ನವೆಂಬರ್ (ಹಿ.ಸ.):
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ತ್ರಿಪಕ್ಷೀಯ ಸಭೆಯ ಬೆನ್ನಲ್ಲೇ ಭಾರತದ ವಿದೇಶಾಂಗ ನೀತಿ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಭಾರತದ ಪ್ರಧಾನಿಯೂ ಜಾಗತಿಕ ನಾಯಕರೊಂದಿಗೆ ಒಂದೇ ಮೇಜಿನಲ್ಲಿ ಕುಳಿತು ಚರ್ಚೆ ನಡೆಸುತ್ತಿದ್ದರು ಎಂಬ ಲೋಕಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ದೇಶಕ್ಕೆ ಕಾಂಗ್ರೆಸ್ನಿಂದ ಉಪದೇಶದ ಅಗತ್ಯವಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಭಾರತ ಬ್ರಿಕ್ಸ್ ಸದಸ್ಯತ್ವವನ್ನೇ ಕಳೆದುಕೊಳ್ಳುತ್ತಿತ್ತು. ಜಾಗತಿಕ ರಾಜತಾಂತ್ರಿಕ ವೇದಿಕೆಯಲ್ಲಿ ಭಾರತವನ್ನು ಮೂಲೆಗುಂಪು ಮಾಡಲಾಗುತ್ತಿತ್ತು ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಭಾರತದ ವಿದೇಶಾಂಗ ನೀತಿ ದುರ್ಬಲವಾಗಿತ್ತು ಎಂದು ಆರೋಪಿಸಿದ್ದಾರೆ.
2013ರ ಪರಿಸ್ಥಿತಿಯನ್ನು ಉಲ್ಲೇಖಿಸಿ, ಕಾಂಗ್ರೆಸ್ ಆಡಳಿತ ಮುಂದುವರಿದಿದ್ದರೆ ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವ ಕಳೆದುಕೊಳ್ಳುತ್ತಿತ್ತು ಎಂದು ಟೀಕಿಸಿದ್ದಾರೆ.
ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸ್ಥಾನವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದು, ಪಾಕಿಸ್ತಾನದ ಮೇಲಿನ ಒಲವಿಗಾಗಿ ಶರ್ಮ್ ಎಲ್ ಶೇಖ್ನಲ್ಲಿ ಭಾರತದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿತ್ತು ಎಂದು ಭಂಡಾರಿ ಆರೋಪಿಸಿದ್ದಾರೆ.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಚೀನಾ ನೀತಿಯಿಂದಾಗಿ 1962ರ ಯುದ್ಧದಲ್ಲಿ ಭಾರತ ಅವಮಾನ ಎದುರಿಸಬೇಕಾಯಿತು ಎಂದೂ ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನದ ಮೇಲಿನ ಪ್ರೀತಿಯನ್ನೇ ಕೇಂದ್ರವಾಗಿಟ್ಟುಕೊಂಡು ಭಾರತದ ವಿದೇಶಾಂಗ ನೀತಿಯನ್ನು ರೂಪಿಸಿದ ಕಾಂಗ್ರೆಸ್ನಿಂದ ದೇಶಕ್ಕೆ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಟ್ರಂಪ್, ಕ್ಸಿ ಜಿನ್ಪಿಂಗ್ ಹಾಗೂ ಪುಟಿನ್ ನಡುವಿನ ತ್ರಿಪಕ್ಷೀಯ ಸಭೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಭಾರತದ ಪ್ರಧಾನಿಯೂ ಈ ಮೇಜಿನ ಬಳಿ ಕುಳಿತಿರುತ್ತಿದ್ದರು.
ರಾಜಿ ಮಾಡಿಕೊಂಡಿರುವ ಪ್ರಧಾನಿಯೊಬ್ಬರು ಎಂದಿಗೂ ಈ ಮೇಜಿನ ಬಳಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಚೀನಾದ ಶಾಂಘೈನಲ್ಲಿ ನಡೆದ ಸಭೆಯಲ್ಲಿ ಮೂವರು ನಾಯಕರು 'ಶಾಂತಿಯತ್ತ ಸಾಗುವ ಘೋಷಣೆ' ಎಂಬ ಜಂಟಿ ಘೋಷಣೆಯನ್ನು ಅಂಗೀಕರಿಸಿದ್ದಾರೆ.
ಪರಮಾಣು ಅಪಾಯಗಳನ್ನು ಕಡಿಮೆ ಮಾಡುವುದು, ಇಂಧನ ಪೂರೈಕೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಹಾಗೂ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ದುರ್ಬಳಕೆಯನ್ನು ತಡೆಯುವ ಕುರಿತು ಚರ್ಚಿಸಲು ನಾಯಕರು ಬದ್ಧತೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದೇ ವಿಚಾರವಾಗಿ ಬುಧವಾರ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಜಾಗತಿಕ ವ್ಯವಹಾರಗಳಲ್ಲಿ ಭಾರತದ ಪಾತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಭಾರತದ ಗಾತ್ರ ಮತ್ತು ಪ್ರಭಾವಕ್ಕೆ ತಕ್ಕಂತೆ ಜಾಗತಿಕ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
ಆದರೆ, ಪ್ರಸ್ತುತ ಭಾರತ ಅಂಚಿನ ಪಾತ್ರಕ್ಕೆ ಸೀಮಿತವಾಗಿದೆ. ಪಾಕಿಸ್ತಾನ ಮಾತ್ರ ಇರಾನ್ ಮತ್ತು ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಟೀಕಿಸಿದ್ದರು.
ರಾಹುಲ್ ಹೇಳಿಕೆಗೆ ಈ ಹಿಂದೆಯೇ ಪ್ರತಿಕ್ರಿಯಿಸಿದ್ದ ಭಂಡಾರಿ, ಅವರನ್ನು ಪಾಕಿಸ್ತಾನದ ಅಭಿಮಾನಿ ಎಂದು ಟೀಕಿಸಿದ್ದರು. ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ಭಾರತದ ಶಾಂತಿ ಪ್ರಯತ್ನಗಳನ್ನು ಒಪ್ಪಿಕೊಂಡಿವೆ.
ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದ ನಿರ್ಬಂಧಗಳಿಂದ ಇರಾನ್ ಭಾರತಕ್ಕೆ ವಿನಾಯಿತಿ ನೀಡಿದೆ ಎಂಬ ಅಂಶಗಳನ್ನು ರಾಹುಲ್ ಗಮನಿಸಬೇಕು ಎಂದು ಹೇಳಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R