ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ದೇಶದ ವಿರುದ್ಧ ಸುಳ್ಳು ಆರೋಪ: ಪ್ರಹ್ಲಾದ ಜೋಶಿ ಆಕ್ರೋಶ
ನವದೆಹಲಿ, 20 ನವೆಂಬರ್ (ಹಿ.ಸ.): 1893ರಲ್ಲಿ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಭಾರತಕ್ಕೆ ಜಾಗತಿಕ ಗೌರವ ತಂದುಕೊಟ್ಟಿದ್ದರು. ಆದರೆ ಇಂದು ಅದೇ ನಗರವನ್ನು ಬಳಸಿಕೊಂಡು ರಾಹುಲ್ ಗಾಂಧಿ ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತ
ಪ್ರಹ್ಲಾದ ಜೋಶಿ ಫೈಲ್ ಪೋಟೋ


ನವದೆಹಲಿ, 20 ನವೆಂಬರ್ (ಹಿ.ಸ.):

1893ರಲ್ಲಿ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಭಾರತಕ್ಕೆ ಜಾಗತಿಕ ಗೌರವ ತಂದುಕೊಟ್ಟಿದ್ದರು. ಆದರೆ ಇಂದು ಅದೇ ನಗರವನ್ನು ಬಳಸಿಕೊಂಡು ರಾಹುಲ್ ಗಾಂಧಿ ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಭಾರತೀಯ ವಿಶ್ವವಿದ್ಯಾಲಯಗಳಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಅವರು ದೆಹಲಿ ವಿಶ್ವವಿದ್ಯಾಲಯ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಹಲವು ಬಾರಿ ಭೇಟಿ ನೀಡಿರುವ ದೃಶ್ಯಗಳು ಅವರದೇ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಲಭ್ಯವಿವೆ. ಹೀಗಿರುವಾಗ ವಿಶ್ವವಿದ್ಯಾಲಯಗಳಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಹೇಳಿಕೆ ಅವರ ಹಿಂದಿನ ಭೇಟಿಗಳ ವಿಡಿಯೊಗಳಿಗೇ ವಿರುದ್ಧವಾಗಿದೆ ಎಂದು ಜೋಶಿ ಹೇಳಿದ್ದಾರೆ.

ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಿದ್ದಾರೆ ಎಂಬ ಆರೋಪಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ರಾಜ್ಯ, ಖಾಸಗಿ ಮತ್ತು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಸೇರಿದಂತೆ 1,100ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಅವುಗಳಿಗೆ ಅರ್ಹತೆ ಮತ್ತು ಆಯ್ಕೆಯ ಆಧಾರದ ಮೇಲೆ ಶಿಕ್ಷಣ ತಜ್ಞರು ಮುಖ್ಯಸ್ಥರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಂವಿಧಾನಬದ್ಧ ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿರುವವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ವಿದೇಶಿ ನೆಲದಲ್ಲಿ ದೇಶದ ವಿರುದ್ಧ ಆಧಾರರಹಿತ ಪ್ರಚಾರ ಮಾಡುವುದು ಸರಿಯಲ್ಲ. ವಿದೇಶಗಳಲ್ಲಿ ಭಾರತದ ಹೆಸರಿಗೆ ಧಕ್ಕೆ ತರುವ ಮೂಲಕ ರಾಜಕೀಯ ಪ್ರಸ್ತುತತೆ ಗಳಿಸಲು ಸಾಧ್ಯವಿಲ್ಲ. ಕೃತಕ ನಿರೂಪಣೆಗಳಿಗಿಂತ ವಾಸ್ತವಾಂಶಗಳೇ ಮುಖ್ಯ ಎಂದು ಪ್ರಹ್ಲಾದ ಜೋಶಿ ತಮ್ಮ ಎಕ್ಸ್ ಸಂದೇಶದಲ್ಲಿ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande