
ಬಳ್ಳಾರಿ, 20 ನವೆಂಬರ್ (ಹಿ.ಸ.)
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳು ಹಾಗೂ ಮುದ್ರಿತ ಜಾಹೀರಾತುಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಭಾಷೆ ಬಳಸಬೇಕು. ನವೆಂಬರ್ 24ರೊಳಗೆ ಈ ನಿಯಮ ಪಾಲಿಸದ ಉದ್ದಿಮೆಗಳ ಪರವಾನಿಗೆ ರದ್ದುಗೊಳಿಸಿ, ಬೀಗಮುದ್ರೆ ಹಾಕಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ಸರ್ಕಾರದ ಕಾಯ್ದೆಯನ್ವಯ ಎಲ್ಲ ವಾಣಿಜ್ಯ ಮಳಿಗೆಗಳ ನಾಮಫಲಕ ಹಾಗೂ ಮುದ್ರಿತ ಜಾಹೀರಾತುಗಳಲ್ಲಿ ಶೇ.60ರಷ್ಟು ಸ್ಥಳಾವಕಾಶವನ್ನು ಕನ್ನಡ ಭಾಷೆಗೆ ಮೀಸಲಿಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಇರಬೇಕು. ಅನ್ಯಭಾಷೆಯ ಅಕ್ಷರಗಳಿಗಿಂತ ಕನ್ನಡ ಅಕ್ಷರಗಳು ದೊಡ್ಡದಾಗಿ ಹಾಗೂ ಪ್ರಧಾನವಾಗಿ ಕಾಣುವಂತಿರಬೇಕು. ಜಾಹೀರಾತು ಮುದ್ರಣಕಾರರು ಕೂಡ ಜಾಹೀರಾತುಗಳನ್ನು ಮುದ್ರಿಸುವಾಗ ಶೇ.60ರಷ್ಟು ಕನ್ನಡ ಬಳಕೆಯ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.
ನವೆಂಬರ್ 24ರ ಗಡುವಿನೊಳಗೆ ನಿಯಮಾನುಸಾರ ನಾಮಫಲಕಗಳನ್ನು ಬದಲಾಯಿಸಿಕೊಳ್ಳದಿದ್ದರೆ, ಪಾಲಿಕೆ ವತಿಯಿಂದಲೇ ಅಂತಹ ನಾಮಫಲಕಗಳು ಹಾಗೂ ಜಾಹೀರಾತುಗಳನ್ನು ತೆರವುಗೊಳಿಸಲಾಗುವುದು. ನಿಯಮ ಉಲ್ಲಂಘಿಸುವ ಉದ್ದಿಮೆಗಳಿಗೆ ದಂಡ ವಿಧಿಸುವುದರ ಜತೆಗೆ ಪರವಾನಿಗೆ ರದ್ದುಗೊಳಿಸಿ, ಉದ್ದಿಮೆಗಳನ್ನು ಸ್ಥಗಿತಗೊಳಿಸುವ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್