ಕಾಗಿಣಾ ನದಿಯಲ್ಲಿ ಸರ್ಕಾರಿ ಔಷಧಿಗಳು ಪತ್ತೆ; ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಕಲಬುರಗಿ ಜಿಲ್ಲೆಯ ಶಹಬಾದ್-ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿ-150ರ ಕಾಗಿಣಾ ನದಿ ಸೇತುವೆ ಕೆಳಗೆ ಉಚಿತವಾಗಿ ವಿತರಿಸಬೇಕಾದ ಸರ್ಕಾರಿ ಮಾತ್ರೆಗಳು ಹಾಗೂ ಮಕ್ಕಳ ಸಿರಪ್ ಬಾಟಲಿಗಳು ಪತ್ತೆಯಾಗಿವೆ.
Government Medicines Found Dumped in Kagina River in Kalaburagi, Public Outrage Over Health Department Negligence


ಕಲಬುರಗಿ, 20 ನವೆಂಬರ್ (ಹಿ.ಸ.):

ಬಡವರು ಹಾಗೂ ಅಗತ್ಯವಿರುವವರಿಗೆ ಉಚಿತವಾಗಿ ವಿತರಿಸಬೇಕಾದ ಸರ್ಕಾರಿ ಔಷಧಿಗಳು ಕಾಗಿಣಾ ನದಿಯ ಪಾತ್ರದಲ್ಲಿ ಪತ್ತೆಯಾಗಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶಹಬಾದ್-ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿ-150ರ ಕಾಗಿಣಾ ನದಿ ಸೇತುವೆಯ ಕೆಳಭಾಗದಲ್ಲಿ ಸರ್ಕಾರಿ ಔಷಧಿಗಳು ಹಾಗೂ ಸಿರಪ್ ಬಾಟಲಿಗಳನ್ನು ಎಸೆಯಲಾಗಿರುವುದು ಬೆಳಕಿಗೆ ಬಂದಿದೆ.

ಮೆಟ್ಫಾರ್ಮಿನ್ ಹೈಡ್ರೋಕ್ಲೋರೈಡ್ 500 ಎಂಜಿ ಮಾತ್ರೆಗಳು, ಟೆಲ್ಮಿಸಾರ್ಟನ್ 40 ಎಂಜಿ ಮಾತ್ರೆಗಳು ಸೇರಿದಂತೆ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ನೀಡುವ ಸಿರಪ್ ಬಾಟಲಿಗಳು ನದಿ ಪಾತ್ರದಲ್ಲಿ ಪತ್ತೆಯಾಗಿವೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರು ಹಾಗೂ ಸಾಮಾನ್ಯ ಜನರಿಗೆ ಉಚಿತವಾಗಿ ವಿತರಿಸಬೇಕಾದ ಔಷಧಿಗಳು ಈ ರೀತಿ ನದಿ ಪಾಲಾಗಿರುವುದು ಆರೋಗ್ಯ ಇಲಾಖೆಯ ಕಾರ್ಯವೈಖರಿ ಮತ್ತು ನಿರ್ವಹಣೆಯ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅಗತ್ಯವಿರುವವರಿಗೆ ಔಷಧಿಗಳು ಸಮರ್ಪಕವಾಗಿ ತಲುಪುತ್ತಿಲ್ಲವೇ ಅಥವಾ ಔಷಧಿಗಳ ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ನಿರ್ಲಕ್ಷ್ಯ ನಡೆದಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.

ಸರ್ಕಾರದ ನಿಯಮಗಳ ಪ್ರಕಾರ ಅವಧಿ ಮೀರಿದ ಮಾತ್ರೆಗಳು, ಸಿರಪ್ಗಳು ಹಾಗೂ ಇತರ ವೈದ್ಯಕೀಯ ಔಷಧಿಗಳನ್ನು ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡುವುದು ಕಡ್ಡಾಯವಾಗಿದೆ.

ಆದರೆ, ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ ಔಷಧಿಗಳನ್ನು ನದಿ ಪಾತ್ರದಲ್ಲಿ ಎಸೆದಿರುವುದು ಗಂಭೀರ ನಿರ್ಲಕ್ಷ್ಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸರ್ಕಾರಿ ಔಷಧಿಗಳನ್ನು ನದಿ ಪಾತ್ರದಲ್ಲಿ ಎಸೆದವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಈ ಪ್ರಕರಣದ ಕುರಿತು ಆರೋಗ್ಯ ಇಲಾಖೆ ಸಮಗ್ರ ತನಿಖೆ ನಡೆಸಿ, ಔಷಧಿಗಳು ಎಲ್ಲಿಂದ ಬಂದಿವೆ ಮತ್ತು ಅವುಗಳನ್ನು ಯಾರು ಎಸೆದಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande