
ನವದೆಹಲಿ, 20 ನವೆಂಬರ್ (ಹಿ.ಸ.):
ಭಾರತದಲ್ಲಿ ಚೀತಾ ಸಂರಕ್ಷಣೆ ಹಾಗೂ ಅವುಗಳ ಸಂತತಿ ಪುನಃಸ್ಥಾಪಿಸುವ ಪ್ರಯತ್ನಕ್ಕೆ ಮಹತ್ವದ ಯಶಸ್ಸು ದೊರೆತಿದೆ. ಬೋಟ್ಸ್ವಾನಾದಿಂದ ಭಾರತಕ್ಕೆ ತರಲಾಗಿದ್ದ ಎರಡೂವರೆ ವರ್ಷದ ಹೆಣ್ಣು ಚೀತಾ ‘ಕೆಯೋಎಂಜಿ-3’ ಶುಕ್ರವಾರ ಕಾಡಿನಲ್ಲಿ ನಾಲ್ಕು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದೆ.
ಇದರೊಂದಿಗೆ ದೇಶದಲ್ಲಿನ ಒಟ್ಟು ಚೀತಾಗಳ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಈ ಪೈಕಿ 43 ಚೀತಾಗಳು ಭಾರತದಲ್ಲಿಯೇ ಜನಿಸಿವೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಬೋಟ್ಸ್ವಾನಾದಿಂದ ಭಾರತಕ್ಕೆ ತರಲಾಗಿದ್ದ ಹೆಣ್ಣು ಚೀತಾ ಮರಿಗಳಿಗೆ ಜನ್ಮ ನೀಡಿರುವುದು ಇದೇ ಮೊದಲು. ಮತ್ತೊಂದು ವಿಶೇಷವೆಂದರೆ, ಮರಿಗಳಿಗೆ ಜನ್ಮ ನೀಡುವ ಮೊದಲು ಈ ಹೆಣ್ಣು ಚೀತಾ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಕಾಡಿನ ನೈಸರ್ಗಿಕ ಪರಿಸರದಲ್ಲಿ ವಾಸಿಸಿತ್ತು.
2022ರಲ್ಲಿ ಚೀತಾ ಪುನರ್ವಸತಿ ಯೋಜನೆ ಆರಂಭವಾದ ಬಳಿಕ ಕಾಡಿನಲ್ಲಿ ಚೀತಾ ಮರಿಗಳು ಜನಿಸಿರುವ ಎರಡನೇ ದಾಖಲಿತ ಘಟನೆ ಇದಾಗಿದೆ.
ಈ ಸಾಧನೆಯನ್ನು ಚೀತಾ ಯೋಜನೆಯ ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿರುವ ಭೂಪೇಂದ್ರ ಯಾದವ್, ಭಾರತದಲ್ಲಿ ಚೀತಾಗಳ ಸುಸ್ಥಿರ ಸಂತತಿ ಸ್ಥಾಪಿಸುವ ಪ್ರಯತ್ನದಲ್ಲಿ ಇದೊಂದು ಹೆಮ್ಮೆಯ ಕ್ಷಣವಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಹೊಸ ಜನನವು ಚೀತಾ ಸಂರಕ್ಷಣೆಯ ಆಶಯಕ್ಕೆ ಮತ್ತಷ್ಟು ಬಲ ನೀಡುವುದರ ಜತೆಗೆ ವನ್ಯಜೀವಿಗಳ ಸಂರಕ್ಷಣೆಯ ಬದ್ಧತೆಯನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದ್ದಾರೆ.
ವನ್ಯಜೀವಿ ಸಂರಕ್ಷಣೆಗೆ ತಾಳ್ಮೆ, ನಿರಂತರ ಪ್ರಯತ್ನ ಹಾಗೂ ಸಾಮೂಹಿಕ ಸಹಭಾಗಿತ್ವ ಅತ್ಯಗತ್ಯ. ಚೀತಾ ಯೋಜನೆಯ ಯಶಸ್ಸಿಗೆ ಶ್ರಮಿಸುತ್ತಿರುವ ಯೋಜನಾ ನಿರ್ವಹಣಾಧಿಕಾರಿಗಳು, ಪಶುವೈದ್ಯರು, ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ಹಾಗೂ ತಜ್ಞರ ಸಮರ್ಪಣೆ, ಬದ್ಧತೆ ಮತ್ತು ಪರಿಶ್ರಮವನ್ನು ಸಚಿವರು ಶ್ಲಾಘಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.