
ಕಲಬುರಗಿ, 20 ನವೆಂಬರ್ (ಹಿ.ಸ.):
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಲಬುರಗಿ ನಗರದಲ್ಲಿ ಬ್ಲಿಂಕ್ ಇಟ್ ಡೆಲಿವರಿ ರೈಡರ್ಗಳು ಪ್ರತಿಭಟನೆ ನಡೆಸಿದರು.
ನಗರದ ಬ್ಲಿಂಕ್ ಇಟ್ ಕಚೇರಿ ಮುಂದೆ ಜಮಾಯಿಸಿದ ಡೆಲಿವರಿ ಸಿಬ್ಬಂದಿ, ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಡೆಲಿವರಿ ಸಿಬ್ಬಂದಿಗೆ ಆರೋಗ್ಯ ವಿಮೆ (ಹೆಲ್ತ್ ಇನ್ಶೂರೆನ್ಸ್) ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಪ್ರತಿ ಕಿಲೋಮೀಟರ್ಗೆ 10 ರೂಪಾಯಿ ಪಾವತಿಸುವುದಾಗಿ ಕಂಪನಿ ಭರವಸೆ ನೀಡಿದ್ದರೂ, ಸದ್ಯ 7ರಿಂದ 8 ರೂಪಾಯಿ ಮಾತ್ರ ಪಾವತಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶನಿವಾರ ಮತ್ತು ಭಾನುವಾರ ಮಾತ್ರ ಪ್ರತಿ ಕಿಲೋಮೀಟರ್ಗೆ 10 ರೂಪಾಯಿ ನೀಡಲಾಗುತ್ತಿದೆ. ಇದೇ ದರವನ್ನು ವಾರದ ಏಳು ದಿನಗಳೂ ಅನ್ವಯಿಸಬೇಕು ಎಂಬುದು ಡೆಲಿವರಿ ರೈಡರ್ಗಳ ಪ್ರಮುಖ ಬೇಡಿಕೆಯಾಗಿದೆ.
ದಿನಕ್ಕೆ ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡಿದರೂ ಕೇವಲ 500 ರೂಪಾಯಿ ಆದಾಯ ದೊರೆಯುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಇನ್ನು ವೇತನ ಪಾವತಿ ಹಾಗೂ ಇತರೆ ಸಮಸ್ಯೆಗಳ ಕುರಿತು ಪ್ರಶ್ನಿಸಿದರೆ ಕೆಲಸದಿಂದ ತೆಗೆದುಹಾಕುವ (ಕಿಕ್ ಔಟ್) ಬೆದರಿಕೆ ಹಾಕಲಾಗುತ್ತಿದೆ ಎಂದು ಮ್ಯಾನೇಜರ್ ವಿರುದ್ಧವೂ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಡೆಲಿವರಿ ಸಿಬ್ಬಂದಿಯ ಶ್ರಮಕ್ಕೆ ತಕ್ಕ ವೇತನ ನೀಡಬೇಕು, ಆರೋಗ್ಯ ವಿಮೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಹಾಗೂ ಕಿಲೋಮೀಟರ್ಗೆ 10 ರೂಪಾಯಿ ಪಾವತಿ ವ್ಯವಸ್ಥೆಯನ್ನು ವಾರದಾದ್ಯಂತ ಜಾರಿಗೊಳಿಸಬೇಕು.
ಅಲ್ಲದೆ, ಪ್ರಶ್ನಿಸುವ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವ ಬೆದರಿಕೆ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಂಪನಿ ಆಡಳಿತ ಮಂಡಳಿ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂದು ಬ್ಲಿಂಕ್ ಇಟ್ ಡೆಲಿವರಿ ರೈಡರ್ಗಳು ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R