






ಬಳ್ಳಾರಿ, 16 ನವೆಂಬರ್ (ಹಿ.ಸ.)
ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ 2047ರ ವೇಳೆಗೆ ದೇಶವನ್ನು ವಿಕಸಿತ ರಾಷ್ಟ್ರವನ್ನಾಗಿ ನಿರ್ಮಿಸುವ ಮಹಾಸಂಕಲ್ಪದಲ್ಲಿ ಯುವಜನತೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ರಾಜ್ಯಪಾಲೆ ಡಾ. ಸುಧಾ ಯಾದವ್ ಕರೆ ನೀಡಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ಸೋಮವಾರ ನಡೆದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದ ಮಹಾನ್ ಅರಸ ಶ್ರೀಕೃಷ್ಣದೇವರಾಯರು ಕಲೆ, ಸಾಹಿತ್ಯ, ವಾಸ್ತುಶಿಲ್ಪ ಹಾಗೂ ಲೋಕಕಲ್ಯಾಣದ ಸ್ವರ್ಣಯುಗವನ್ನು ಸೃಷ್ಟಿಸಿದ ಐತಿಹಾಸಿಕ ನೆಲದಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದು ಹೆಮ್ಮೆಯ ಸಂಗತಿ. ವಿಶ್ವವಿದ್ಯಾಲಯವು ಕೇವಲ ಇಟ್ಟಿಗೆ ಮತ್ತು ಕಲ್ಲುಗಳಿಂದ ನಿರ್ಮಿತವಾದ ಕಟ್ಟಡವಲ್ಲ. ಇದು ಐತಿಹಾಸಿಕ ಪರಂಪರೆ ಮತ್ತು ಶೈಕ್ಷಣಿಕ ಗೌರವದ ಪ್ರತೀಕವಾಗಿದೆ. 2010ರಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾಲಯವು ಕಡಿಮೆ ಅವಧಿಯಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದೆ ಎಂದರು.
ಲೋಕಭವನದ ಪ್ರಯತ್ನದಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಹಂಚಿಕೆಯಾದ 42 ಕೋಟಿ ರೂ. ಅನುದಾನದಲ್ಲಿ ಡಿಜಿಟಲ್ ಮೂಲಸೌಕರ್ಯ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಹಸಿರು ಆವರಣದ ಪರಿಕಲ್ಪನೆ ಹಾಗೂ ಕೃತಕ ಬುದ್ಧಿಮತ್ತೆಯಂತಹ ಆಧುನಿಕ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿದೆ. ತೃತೀಯ ಲಿಂಗಿಗಳ ಸಮುದಾಯ ಮತ್ತು ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿವೇತನ ನೀಡುವ ಮೂಲಕ ವಿಶ್ವವಿದ್ಯಾಲಯವು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳ ಕೈಯಲ್ಲಿರುವ ಪದವಿ ಕೇವಲ ಕಾಗದದ ತುಂಡಲ್ಲ. ಅದು ಅವರ ಪರಿಶ್ರಮದ ಪ್ರಮಾಣಪತ್ರ ಹಾಗೂ ಸಮಾಜದ ಮೇಲಿರುವ ಜವಾಬ್ದಾರಿಯ ಸಂಕೇತವಾಗಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮಾತಿನಂತೆ ಶಿಕ್ಷಣದಿಂದ ಮಾತ್ರ ಮನುಷ್ಯನ ಮೆದುಳಿನ ಸದುಪಯೋಗ ಸಾಧ್ಯ. ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದಂತೆ ಚಾರಿತ್ರಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಶಿಕ್ಷಣ ಅಗತ್ಯವಾಗಿದೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳಿದಂತೆ ಕನಸುಗಳು ನಮ್ಮನ್ನು ನಿದ್ರಿಸಲು ಬಿಡದಷ್ಟು ದೊಡ್ಡದಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯುವಜನತೆಗೆ ಐದು ಪ್ರಮುಖ ಸಂಕಲ್ಪಗಳು
ಯುವಜನತೆ ಐದು ಪ್ರಮುಖ ಸಂಕಲ್ಪಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದ ರಾಜ್ಯಪಾಲರು, ಉದ್ಯೋಗ ಹುಡುಕುವವರಾಗದೆ ಹೊಸ ಉದ್ಯಮಗಳು ಮತ್ತು ನವೀನ ಆವಿಷ್ಕಾರಗಳ ಮೂಲಕ ಉದ್ಯೋಗ ಸೃಷ್ಟಿಸುವವರಾಗಬೇಕು. ನಶಾಮುಕ್ತ ಕರ್ನಾಟಕ ಹಾಗೂ ನಶಾಮುಕ್ತ ಭಾರತ ನಿರ್ಮಾಣದ ಧ್ವಜವಾಹಕರಾಗಿ ಮಾದಕ ವಸ್ತುಗಳು ಮತ್ತು ವ್ಯಸನಗಳಿಂದ ದೂರವಿರಬೇಕು. ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ನಿರಂತರ ಕಲಿಕೆಗೆ ಆದ್ಯತೆ ನೀಡಬೇಕು ಎಂದರು.
ಪರಿಸರ ಅಸಮತೋಲನ ಜಗತ್ತು ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ. 'ಒಂದು ಮರ - ತಾಯಿ' ಎಂಬ ಭಾವನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸಬೇಕು. ಸ್ವಚ್ಛತೆಯನ್ನು ಕೇವಲ ಅಭಿಯಾನವಾಗಿ ನೋಡದೆ ಜೀವನಶೈಲಿಯನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯಪಾಲರು ಸಭಿಕರಿಗೆ ನಶಾಮುಕ್ತ ಭಾರತ ಪ್ರತಿಜ್ಞೆಯನ್ನು ಬೋಧಿಸಿದರು.
ಕೃತಕ ಬುದ್ಧಿಮತ್ತೆಗೆ ಮಾನವ ಸೇವಕನಾಗಬಾರದು
ಘಟಿಕೋತ್ಸವದ ಭಾಷಣ ಮಾಡಿದ ಕರ್ನಾಟಕ ಮತ್ತು ಒಡಿಶಾ ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಮೂರ್ತಿ ಡಾ. ಕೃಷ್ಣ ಎಸ್. ದೀಕ್ಷಿತ್ ಅವರು, ವಿಜಯನಗರ ಸಾಮ್ರಾಜ್ಯದ ಮಹಾನ್ ಅರಸ ಶ್ರೀಕೃಷ್ಣದೇವರಾಯರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇಟ್ಟಿರುವುದು ಅತ್ಯಂತ ಸೂಕ್ತವಾಗಿದೆ. ಇತಿಹಾಸಕಾರ ರಾಬರ್ಟ್ ಸಿವೆಲ್ ಅವರು ತಮ್ಮ 'ಎ ಫರ್ಗಾಟನ್ ಎಂಪೈರ್ ವಿಜಯನಗರ' ಕೃತಿಯಲ್ಲಿ ಶ್ರೀಕೃಷ್ಣದೇವರಾಯರನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ ಎಂದರು.
ಭಾರತವು ಪ್ರಾಚೀನ ಕಾಲದಿಂದಲೂ ಜ್ಞಾನಾನ್ವೇಷಕರು ಮತ್ತು ಸಂತ ಪರಂಪರೆಯ ನಾಡಾಗಿದೆ. ತಕ್ಷಶಿಲಾ, ನಳಂದಾ, ಪುಷ್ಪಗಿರಿ, ವಿಕ್ರಮಶಿಲಾ, ವಲ್ಲಭಿ, ಓದಂತಪುರಿ ಹಾಗೂ ಸೋಮಪುರದಂತಹ ಪ್ರಸಿದ್ಧ ವಿದ್ಯಾಕೇಂದ್ರಗಳು ದೇಶದಲ್ಲಿದ್ದವು ಎಂಬುದನ್ನು ವಿಲ್ ಡ್ಯೂರಾಂಟ್, ಆರ್ನಾಲ್ಡ್ ಟಾಯ್ಬಿ ಮತ್ತು ಆರ್.ಸಿ. ಮಜುಂದಾರ್ ಅವರು ದಾಖಲಿಸಿದ್ದಾರೆ. ಯುನೆಸ್ಕೋ ವಿಶ್ವ ಪರಂಪರೆ ಸಮಾವೇಶದ ದಾಖಲೆಗಳ ಪ್ರಕಾರ, ನಳಂದಾ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಸುಮಾರು 800 ವರ್ಷಗಳ ಕಾಲ ವ್ಯವಸ್ಥಿತವಾಗಿ ಜ್ಞಾನವನ್ನು ಹಂಚಿದೆ ಎಂದು ಹೇಳಿದರು.
ಶಿಕ್ಷಣದ ಉದ್ದೇಶ ಕೇವಲ ಮಾಹಿತಿಯನ್ನು ಸಂಗ್ರಹಿಸುವುದಲ್ಲ. ಅದನ್ನು ನೈಜ ಜ್ಞಾನವನ್ನಾಗಿ ಪರಿವರ್ತಿಸಿ, ಸಮಾಜದ ಒಳಿತಿಗೆ ಬಳಸುವ ವಿವೇಕವನ್ನು ಬೆಳೆಸುವುದಾಗಿದೆ. ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆಯ ಆಶಯಗಳಾದ ರಾಷ್ಟ್ರೀಯತೆ, ದೇಶಭಕ್ತಿ, ಭ್ರಾತೃತ್ವ ಮತ್ತು ವಿಶಾಲ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದು ತಿಳಿಸಿದರು.
ಜಗತ್ತು ಎದುರಿಸುತ್ತಿರುವ ಕೃತಕ ಬುದ್ಧಿಮತ್ತೆಯ ಸುನಾಮಿಯಿಂದ ಮಾನವನ ಸಹಜ ಬುದ್ಧಿಶಕ್ತಿ ದುರ್ಬಲಗೊಳ್ಳಬಾರದು. ಕೃತಕ ಬುದ್ಧಿಮತ್ತೆ ಮಾನವನ ಸೇವೆ ಮಾಡುವ ಸಾಧನವಾಗಿರಬೇಕೇ ಹೊರತು, ಮಾನವನೇ ಅದಕ್ಕೆ ಸೇವಕನಾಗಬಾರದು ಎಂದು ಎಚ್ಚರಿಸಿದರು.
ಹೊಸ ತಂತ್ರಜ್ಞಾನ ಆಧಾರಿತ ಕೋರ್ಸ್ಗಳ ಪರಿಚಯ
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ವಿಶ್ವವಿದ್ಯಾಲಯವು 17ನೇ ವರ್ಷಕ್ಕೆ ಕಾಲಿಟ್ಟಿದ್ದು, ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಹಲವು ಸಾಧನೆಗಳನ್ನು ಮಾಡಿದೆ. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ದತ್ತಾಂಶ ವಿಜ್ಞಾನ, ಕ್ರಿಪ್ಟೊ ತಂತ್ರಜ್ಞಾನ, ಹಣಕಾಸು ತಂತ್ರಜ್ಞಾನ, ಸರಕು ಸಾಗಣೆ ನಿರ್ವಹಣೆ ಹಾಗೂ ವ್ಯವಹಾರ ವಿಶ್ಲೇಷಣೆಯಂತಹ ಹೊಸ ಕೋರ್ಸ್ಗಳನ್ನು ಪರಿಚಯಿಸಲಾಗಿದೆ. ಸ್ನಾತಕೋತ್ತರ ಹಂತದಲ್ಲಿ ವಿಧಿವಿಜ್ಞಾನ, ವೈದ್ಯಕೀಯ ಭೌತಶಾಸ್ತ್ರ ಮತ್ತು ಮನೋವಿಜ್ಞಾನ ಕೋರ್ಸ್ಗಳನ್ನು ಆರಂಭಿಸಲಾಗಿದೆ ಎಂದರು.
ವಿಶ್ವವಿದ್ಯಾಲಯವು 30ಕ್ಕೂ ಹೆಚ್ಚು ಹಕ್ಕುಸ್ವಾಮ್ಯ ಪೇಟೆಂಟ್ಗಳನ್ನು ಪಡೆದುಕೊಂಡಿದ್ದು, ವಿವಿಧ ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿಶ್ವಸಂಸ್ಥೆಯ ಪರಿಸರ ಸಂಸ್ಥೆಯಿಂದ 'ಜಾಗತಿಕ ಹಸಿರು ವಿಶ್ವವಿದ್ಯಾಲಯ ಪ್ರಶಸ್ತಿ-2026' ಲಭಿಸಿರುವುದು ಹೆಮ್ಮೆಯ ಸಂಗತಿ. ಅಮೆರಿಕ, ಚಿಲಿ ಮತ್ತು ಇಂಡೋನೇಷಿಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೊಂದಿಗೆ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ. ವಿದ್ಯಾರ್ಥಿಗಳ ಕ್ರೀಡಾ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ 15 ಲಕ್ಷ ರೂ. ನಗದು ಬಹುಮಾನ ನೀಡಿ ಗೌರವಿಸಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯಡಿ 22 ಗ್ರಾಮಗಳನ್ನು ದತ್ತು ಪಡೆದುಕೊಳ್ಳಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶ್ವವಿದ್ಯಾಲಯವು ಶೈಕ್ಷಣಿಕ ಸಾಧನೆ, ಸಂಶೋಧನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್