
ಬಳ್ಳಾರಿ, 16 ನವೆಂಬರ್ (ಹಿ.ಸ.)
ಬಳ್ಳಾರಿ ನಗರದ ಪ್ರಸಿದ್ಧ ಶ್ರೀ ಕುಮಾರಸ್ವಾಮಿ ದೇವಸ್ಥಾನದ ಹುಂಡಿಗಳು ತುಂಬಿರುವ ಹಿನ್ನೆಲೆಯಲ್ಲಿ ನವೆಂಬರ್ 18ರಂದು ಕಾಣಿಕೆ ಹಣ ಎಣಿಕೆ ಕಾರ್ಯ ನಡೆಸಲು ನಿರ್ಧರಿಸಲಾಗಿದೆ.
ದೇವಸ್ಥಾನದ ಹುಂಡಿಗಳು ಭರ್ತಿಯಾಗಿರುವುದರಿಂದ ಅವುಗಳನ್ನು ತೆರೆದು ಕಾಣಿಕೆ ಹಣ ಎಣಿಸಲು ದಿನಾಂಕ ನಿಗದಿಪಡಿಸುವಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಮನವಿ ಸಲ್ಲಿಸಿದ್ದರು. ಸರ್ಕಾರದ ಸುತ್ತೋಲೆಯ ನಿರ್ದೇಶನದಂತೆ ನವೆಂಬರ್ 18ರಂದು ಎಣಿಕೆ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.
ತಹಶೀಲ್ದಾರ್ ಅವರ ಮೇಲುಸ್ತುವಾರಿಯಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಉಪತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು, ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ದೇವಸ್ಥಾನದ ಸಿಬ್ಬಂದಿ ಹಾಗೂ ಗೃಹರಕ್ಷಕ ಸಿಬ್ಬಂದಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಗುತ್ತದೆ.
ಹುಂಡಿ ಕಾಣಿಕೆ ಹಣ ಎಣಿಕೆ ಕಾರ್ಯವನ್ನು ನಿಯಮಾನುಸಾರ ಸಂಪೂರ್ಣವಾಗಿ ವೀಡಿಯೊ ಚಿತ್ರೀಕರಣದೊಂದಿಗೆ ನಡೆಸುವಂತೆ ಸೂಚಿಸಲಾಗಿದೆ. ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಹುಂಡಿಗಳ ಕೀಗಳನ್ನು ಕಚೇರಿಯ ಸುಪರ್ದಿಗೆ ಮರಳಿಸಬೇಕು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್