
ಬೆಂಗಳೂರು, 16 ನವೆಂಬರ್ (ಹಿ.ಸ.):
ರಿಯಲ್ ಎಸ್ಟೇಟ್ ವ್ಯವಹಾರದ ವಿಚಾರವಾಗಿ ಉಂಟಾದ ಹಣಕಾಸಿನ ವಿವಾದ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ 30 ಲಕ್ಷ ರೂ. ಸುಪಾರಿ ನೀಡಿ ಕೊಲೆ ಮಾಡಿಸಿರುವ ಘಟನೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಚರಣ್ ಹಾಗೂ ಕೊಲೆಗೆ ಸುಪಾರಿ ನೀಡಿದ್ದ ಆರೋಪಿ ಕಿರಣ್ ಇಬ್ಬರೂ ಒಟ್ಟಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಆದರೆ, ವ್ಯವಹಾರದ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ಕಿರಣ್ ವ್ಯವಹಾರದಿಂದ ಹೊರಬಂದಿದ್ದ. ಬಳಿಕ ಚರಣ್ ವಿರುದ್ಧ ಹಗೆ ಸಾಧಿಸಲು ಆರಂಭಿಸಿದ್ದ ಎನ್ನಲಾಗಿದೆ.
ಇದೇ ದ್ವೇಷದ ಹಿನ್ನೆಲೆಯಲ್ಲಿ ಕಿರಣ್, ರುದ್ರೇಶ್ ಎಂಬಾತನೊಂದಿಗೆ ಮಾತುಕತೆ ನಡೆಸಿ ಚರಣ್ ಹತ್ಯೆಗೆ 30 ಲಕ್ಷ ರೂ. ಸುಪಾರಿ ನೀಡಿದ್ದ. ಕಿರಣ್ನಿಂದ ಸುಪಾರಿ ಪಡೆದ ರುದ್ರೇಶ್, ಲೋಕೇಶ್ ಎಂಬಾತನಿಗೆ ಕೊಲೆಯ ಜವಾಬ್ದಾರಿ ವಹಿಸಿದ್ದ. ಬಳಿಕ ಆಕಾಶ್ ಹಾಗೂ ಮತ್ತೊಬ್ಬ ಕಿರಣ್ ಮೂಲಕ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಚರಣ್ ಅವರ ಚಲನವಲನಗಳನ್ನು ನಿರಂತರವಾಗಿ ಗಮನಿಸುತ್ತಿದ್ದ ಆರೋಪಿಗಳು, ಕಚೇರಿಗೆ ಬಂದ ಸಂದರ್ಭದಲ್ಲಿ ಹತ್ಯೆ ಮಾಡುವುದು ಸೂಕ್ತ ಎಂದು ನಿರ್ಧರಿಸಿದ್ದರು. ಅದರಂತೆ ಚರಣ್ ಕಚೇರಿಗೆ ಬಂದ ವೇಳೆ ಆಕಾಶ್ ಮತ್ತು ಕಿರಣ್ ಲಾಂಗು, ಮಚ್ಚುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ನ್ಯೂಟೌನ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಕೊಲೆಯ ಹಿಂದಿನ ಸಂಪೂರ್ಣ ಸಂಚು, ಹಣಕಾಸಿನ ವ್ಯವಹಾರ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರದ ವೈಷಮ್ಯವೇ ಕೊಲೆಗೆ ಪ್ರಮುಖ ಕಾರಣವಾಗಿದ್ದು, 30 ಲಕ್ಷ ರೂ.ಗೆ ಸುಪಾರಿ ನೀಡಿರುವ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R