
ಗದಗ, 16 ನವೆಂಬರ್ (ಹಿ.ಸ.)
ವಾರ್ಡ ಹಾಗೂ ಗ್ರಾಮವಾರು ಗ್ಯಾರಂಟಿ ಯೋಜನೆ ಸಮಿತಿಗಳನ್ನು ರಚಿಸಲಾಗಿದ್ದು ಸಮಿತಿ ಸದಸ್ಯರುಗಳು ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹರಿಗೆ ವಿಳಂಬವಿಲ್ಲದೇ ಸಕಾಲದಲ್ಲಿಯೇ ತಲುಪಿಸಲು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಲು ಇಲಾಖೆಗಳ ಅಧಿಕಾರಿಗಳು ಸೂಕ್ತ ಸಹಕಾರ ನೀಡಬೇಕು. ಗ್ಯಾರಂಟಿ ಯೋಜನೆಗಳ ಸೌಲಭ್ಯ ವಿತರಣೆಯು ಶೇ 100 ರಷ್ಟು ಪ್ರಗತಿ ಸಾಧಿಸಲು ಕೈ ಜೋಡಿಸಬೇಕೆಂದು ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೊಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.
ಗದಗ ನಗರದ ಜಿಲ್ಲಾ ಪಂಚಾಯತ್ ವಿ.ಸಿ. ಹಾಲ್ ದಲ್ಲಿಂದು ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಡವರಿಗೆ ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿಸುವಲ್ಲಿ ವಿನಾಕಾರಣ ವಿಳಂಬವಾಗಬಾರದು. ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿಯೇ ತಲುಪಿಸುವಂತಾಗಬೇಕು. ಕೋಟುಮಚಗಿ, ಹೊಂಬಳ, ಬೆಟಗೇರಿ ಸೇರಿದಂತೆ ವಿವಿಧ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು, ಮಹಿಳೆಯರು, ಹಿರಿಯ ನಾಗರಿಕರು ಕುಳಿತುಕೊಳ್ಳಲು ಸೂಕ್ತ ಆಸನದ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆ ಇರುವಂತೆ ಗಮನ ಹರಿಸಬೇಕು ಎಂದರು. ಬೆಟಗೇರಿ ಬಸ್ ನಿಲ್ದಾಣದಲ್ಲಿರುವ ಟ್ರಾನ್ಸಫರ್ಮರ್ ( ಟಿ.ಸಿ) ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಹಾಗೂ ಆರ್ಥಿಕ ಸಬಲೀಕರಣಗೊಳಿಸಲು ಗೃಹಲಕ್ಮೀ ಯೋಜನೆಯನ್ನು ಜಾರಿಗೊಳಿಸಿದ್ದು ಈ ಸೌಲಭ್ಯದಿಂದ ಯಾವ ಅರ್ಹ ಫಲಾನುಭವಿಯೂ ವಂಚಿತರಾಗದಂತೆ ನೋಡಿಕೊಳ್ಳಬೇಕು ಗೃಹಲಕ್ಷ್ಮೀ ಯೋಜನೆಯ ಹಣ ದುರುಪಯೋಗವಾಗದಂತೆ ಕ್ರಮ ವಹಿಸಬೇಕು. ಮನೆ ಮನೆಗೆ ತೆರಳಿ ಗೃಹಲಕ್ಷ್ಮಿ ಯೋಜನೆಯ ಸರ್ವೆ ಕಾರ್ಯ ಚುರುಕಿನಿಂದ ನಡೆಸಬೇಕು. ಅನ್ನಭಾಗ್ಯ ಯೋಜನೆಯ ಸೌಲಭ್ಯ ಅರ್ಹರಿಗೆ ದೊರಕಬೇಕು. ಕಳ್ಳಸಂತೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಮಾರಾಟವಾಗದಂತೆ ಶಿಸ್ತು ಕ್ರಮ ಜರುಗಿಸಬೇಕು. ಪಡಿತರ ಅಂಗಡಿಗಳಿಗೆ ಅಧಿಕಾರಿಗಳು ಅನಿರೀಕ್ಷಿತ ತಪಾಸಣೆ ನಡೆಸಬೇಕು. ಯುವನಿಧಿ ಯೋಜನೆಯ ಕುರಿತು ಇನ್ನೂ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಅಶೋಕ ಮಂದಾಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪಂಚ ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ಒದಗಿಸಿದರು.
ಯುವನಿಧಿ ಯೋಜನೆಯಡಿ ಗದಗ ತಾಲೂಕಿನಲ್ಲಿ ಅಗಸ್ಟ 2026 ರವರೆಗೆ 3593 ಅಭ್ಯರ್ಥಿಗಳು ನೊಂದಣಿಯಾಗಿದ್ದು 3157 ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ಹಣ ವರ್ಗಾವಣೆಯಾಗಿರುತ್ತದೆ. ಬಾಕಿ ಉಳಿದ 436 ಅಭ್ಯರ್ಥಿಗಳು ಯುವ ನಿಧಿ ಯೋಜನೆಯ ಷರತ್ತುಗಳಿಗೆ ಹಂತ ಹಂತವಾಗಿ ಅರ್ಹರಾಗುತ್ತಾರೆ.
ಶಕ್ತಿ ಯೋಜನೆಯಡಿ ಗದಗ ಘಟಕದಲ್ಲಿ ದಿ:11-6-2023 ರಿಂದ 12-11-2026 ರವರೆಗೆ ಮಹಿಳಾ ಪ್ರಯಾಣಿಕರಿಂದ 11731.94 ಲಕ್ಷ ರೂ. ಆದಾಯವಾಗಿರುತ್ತದೆ. ದಿ: 11-6-2023 ರಿಂದ 12-11-2026 ರವರೆಗೆ ಬೆಟಗೇರಿ ಘಟಕದಲ್ಲಿ ಮಹಿಳಾ ಪ್ರಯಾಣಿಕರಿಂದ 6886.07 ಲಕ್ಷ ರೂ. ಆದಾಯವಾಗಿದೆ.
ಗೃಹ ಲಕ್ಷ್ಮೀ ಯೋಜನೆಯಡಿ ಜುಲೈ 2026 ರವರೆಗೆ ಗದಗ ತಾಲೂಕಿನಲ್ಲಿ 84218 ಅರ್ಜಿಗಳು ನೋಂದಣಿಯಾಗಿದ್ದು 78484 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಪಾವತಿ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಗದಗ ಶಹರದ ಭಾಗದಲ್ಲಿ ಎನ್ ಎಸ್ ಎಫ್ ಎ ಅಕ್ಕಿ ಹಂಚಿಕೆ ( ಕೇಂದ್ರ ಸರ್ಕಾರ) ಅಕ್ಟೋಬರ್ 2026 ಮಾಹೆಯ ಹಂಚಿಕೆಯಡಿ ( ಎಎವೈ + ಬಿಪಿಎಲ್ ) 32659 ಪಡಿತರ ಕಾರ್ಡುದಾರರಿಗೆ 2252.96 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಗದಗ ಗ್ರಾಮೀಣ ಭಾಗದಲ್ಲಿ ಅಕ್ಟೋಬರ್ -2026 ರ ಮಾಹೆಯಲ್ಲಿ ಎನ್ಎಸ್ಎಫ್ಎ ಅಕ್ಕಿ ಹಂಚಿಕೆಯಡಿ (ಎಎವೈ+ ಬಿಪಿಎಲ್) 48404 ಪಡಿತರ ಕಾರ್ಡುದಾರರಿಗೆ 3580.72 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ರಾಜ್ಯ ಸರ್ಕಾರದ ಅನ್ನಭಾಗ್ಯ ಅಕ್ಕಿ ಹಂಚಿಕೆ ಯೋಜನೆಯಡಿ ಗದಗ ಗ್ರಾಮೀಣ ಭಾಗದಲ್ಲಿ ( ಎಎವೈ + ಬಿಪಿಎಲ್) 48404 ಕಾರ್ಡುದಾರರಿಗೆ ಒಟ್ಟು 7527.55 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಗದಗ ಪಡಿತರ ಪ್ರದೇಶ ಭಾಗದಲ್ಲಿ (ಎಎವೈ + ಬಿಪಿಎಲ್ ) 32659 ಪಡಿತರ ಕಾರ್ಡುದಾರರಿಗೆ ಒಟ್ಟು 5364.35 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ಗೃಹಜ್ಯೋತಿ ಯೋಜನೆಯಡಿ 31-10-2026 ರವರೆಗೆ ಗದಗ ಶಹರದಲ್ಲಿ 46608 ಸ್ಥಾವರಗಳು ಅರ್ಹವಿದ್ದು ಆ ಪೈಕಿ 46310 ಸ್ಥಾವರಗಳು ನೊಂದಣಿಯಾಗಿವೆ. ಶೇ 99.36 ಪ್ರಗತಿ ಸಾಧಿಸಲಾಗಿದೆ. ಗದಗ ಗ್ರಾಮೀಣ ಉಪವಿಭಾಗದಲ್ಲಿ ಗೃಹಜ್ಯೋತಿ ಯೋಜನೆಗೆ 53339 ಸ್ಥಾವರಗಳು ಅರ್ಹವಿದ್ದು ಆ ಪೈಕಿ 53134 ಸ್ಥಾವರಗಳು ನೊಂದಣಿಯಾಗಿವೆ. ಶೇ 99.62 ರಷ್ಟು ಪ್ರಗತಿ ಸಾಧಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಬೋಳಣ್ಣವರ, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರುಗಳಾದ ಶರೀಫ್ ಬಿಳೆಯಲಿ, ಶಂಭು ಕಾಳೆ, ಶ್ರೀಮತಿ ಮೀನಾಕ್ಷಿ ಬೆನಕಣ್ಣವರ, ದಯಾನಂದ ಪವಾರ, ಸಂಗು ಕರಕಲಮಟ್ಟಿ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ಮಲ್ಲಪ್ಪ ದಂಡಿನ, ಮಲ್ಲಪ್ಪ ಬಾರಕೇರ, ಶ್ರೀಮತಿ ಸಾವಿತ್ರಿ ಹೂಗಾರ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಎಚ್.ಎಸ್.ಜಿನಗ, ಗ್ಯಾರಂಟಿ ಯೋಜನೆಗೆ ಸಂಬಂಧಿತ ಅಧಿಕಾರಿಗಳು ಹಾಜರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP