ಕಬ್ಬಿನ ಹಂಗಾಮು ಹಿನ್ನೆಲೆ: ಟ್ರ್ಯಾಕ್ಟರ್ ಚಾಲಕರಿಗೆ ಜಾಗೃತಿ ಮೂಡಿಸಿದ ಮುಧೋಳ ಪೊಲೀಸರು
ಬಾಗಲಕೋಟೆ, 16 ನವೆಂಬರ್ (ಹಿ.ಸ.) ಈ ಭಾಗದಲ್ಲಿ ಪ್ರಸಕ್ತ ಸಾಲಿನ ಕಬ್ಬಿನ ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳನ್ನು ಯಾವುದೇ ಕಾರಣಕ್ಕೂ ನಗರದೊಳಗೆ ತರಬಾರದು ಎಂದು ಮುಧೋಳ ವೃತ್ತ ನಿರೀಕ್ಷಕರಾದ (ಸಿಪಿಐ) ಎಂ. ನಾಗರಡ್ಡಿ
ಕಬ್ಬಿನ ಟ್ರ್ಯಾಕ್ಟರ್ ನಿಷೇಧ


ಬಾಗಲಕೋಟೆ, 16 ನವೆಂಬರ್ (ಹಿ.ಸ.)

ಈ ಭಾಗದಲ್ಲಿ ಪ್ರಸಕ್ತ ಸಾಲಿನ ಕಬ್ಬಿನ ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳನ್ನು ಯಾವುದೇ ಕಾರಣಕ್ಕೂ ನಗರದೊಳಗೆ ತರಬಾರದು ಎಂದು ಮುಧೋಳ ವೃತ್ತ ನಿರೀಕ್ಷಕರಾದ (ಸಿಪಿಐ) ಎಂ. ನಾಗರಡ್ಡಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಬ್ಬು ಸಾಗಾಣಿಕೆ ಮಾಡುವ ಟ್ರ್ಯಾಕ್ಟರ್ ಚಾಲಕರನ್ನು ಭೇಟಿ ಮಾಡಿ, ಸಂಚಾರ ನಿಯಮಗಳ ಪಾಲನೆ ಕುರಿತು ವಿಶೇಷ ಜಾಗೃತಿ ಮೂಡಿಸಿದ ಅವರು, ನಗರದ ಸಂಚಾರ ವ್ಯವಸ್ಥೆಯನ್ನು ಸುಗಮವಾಗಿಡಲು ಪೊಲೀಸ್ ಇಲಾಖೆಯೊಂದಿಗೆ ಚಾಲಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಬೈಪಾಸ್ ರಸ್ತೆಗಳ ಬಳಕೆ ಕಡ್ಡಾಯ

ಚಾಲಕರನ್ನುದ್ದೇಶಿಸಿ ಮಾತನಾಡಿದ ಸಿಪಿಐ ಎಂ. ನಾಗರಡ್ಡಿ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ನಗರದ ಮೇಲಿನ ವಾಹನ ದಟ್ಟಣೆಯನ್ನು ತಗ್ಗಿಸುವ ಉದ್ದೇಶದಿಂದ ಮುಧೋಳ ನಗರದ ಎರಡ್ಮೂರು ಕಡೆಗಳಲ್ಲಿ ಸುಸಜ್ಜಿತ ಬೈಪಾಸ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ಕಬ್ಬು ತುಂಬಿದ ಟ್ರ್ಯಾಕ್ಟರ್ ಚಾಲಕರು ನಗರದ ಮುಖ್ಯ ರಸ್ತೆಗಳನ್ನು ಪ್ರವೇಶಿಸದೆ, ಕಡ್ಡಾಯವಾಗಿ ಬೈಪಾಸ್ ರಸ್ತೆಗಳ ಮೂಲಕವೇ ಕಾರ್ಖಾನೆಗಳಿಗೆ ಸಂಚರಿಸಬೇಕು ಎಂದು ಸ್ಪಷ್ಟಪಡಿಸಿದರು.

ಅಪಘಾತ ಮತ್ತು ಟ್ರಾಫಿಕ್ ಸಮಸ್ಯೆ ತಡೆಗೆ ಕ್ರಮ

ಕಬ್ಬು ತುಂಬಿದ ಭಾರಿ ಗಾತ್ರದ ಟ್ರ್ಯಾಕ್ಟರ್ಗಳು ಮತ್ತು ಟ್ರೇಲರ್ಗಳು ನಗರದೊಳಗೆ ಆಗಮಿಸುವುದರಿಂದ ತೀವ್ರತರಹದ ಟ್ರಾಫಿಕ್ ಸಮಸ್ಯೆ ಹಾಗೂ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪಾದಚಾರಿಗಳು ಮತ್ತು ಇತರ ವಾಹನ ಸವಾರರಿಗೆ ತೀವ್ರ ತೊಂದರೆಯಾಗುವುದಲ್ಲದೆ, ಭೀಕರ ರಸ್ತೆ ಅಪಘಾತಗಳು ಸಂಭವಿಸುವ ಅಪಾಯವಿದೆ. ಈ ನಿಟ್ಟಿನಲ್ಲಿ ಟ್ರ್ಯಾಕ್ಟರ್ ಚಾಲಕರು ಹಾಗೂ ಎಲ್ಲ ಭಾರಿ ವಾಹನಗಳ ಚಾಲಕರು ನಿಯಮ ಪಾಲಿಸಿ ಕಡ್ಡಾಯವಾಗಿ ಬೈಪಾಸ್ ರಸ್ತೆಯಲ್ಲಿಯೇ ಸಂಚರಿಸಬೇಕು ಎಂದು ಸಿಪಿಐ ಎಂ. ನಾಗರಡ್ಡಿ ಅವರು ತಿಳಿಸಿದರು.

ಪೊಲೀಸ್ ಇಲಾಖೆಯ ಈ ಸೂಚನೆಯನ್ನು ಉಲ್ಲಂಘಿಸಿ ನಗರದೊಳಗೆ ಪ್ರವೇಶಿಸುವ ಕಬ್ಬಿನ ಟ್ರ್ಯಾಕ್ಟರ್ಗಳ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಈ ಸಂದರ್ಭದಲ್ಲಿ ನೀಡಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande