ರಾಷ್ಟ್ರೀಯ ಪತ್ರಿಕಾ ದಿನಕ್ಕೆ ಗಣ್ಯರ ಶುಭಾಶಯ
ಬೆಂಗಳೂರು, 16 ನವೆಂಬರ್ (ಹಿ.ಸ.): ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ಸಚಿವರು ಪತ್ರಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಶುಭಾಶಯ ಕೋರಿದ್ದಾರೆ. ಸತ್ಯನಿಷ್ಠೆ, ನಿರ್ಭೀತ ವರದಿಗಾರಿಕೆ, ನಿಷ್ಪಕ್ಷಪಾತ ನಿಲುವು ಮತ್ತು ಸಾಮ
ನಿಖಿಲ್ ಕುಮಾರಸ್ವಾಮಿ ಎಕ್ಸ್ ಪೋಸ್ಟ್


ಬೆಂಗಳೂರು, 16 ನವೆಂಬರ್ (ಹಿ.ಸ.):

ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ಸಚಿವರು ಪತ್ರಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಶುಭಾಶಯ ಕೋರಿದ್ದಾರೆ. ಸತ್ಯನಿಷ್ಠೆ, ನಿರ್ಭೀತ ವರದಿಗಾರಿಕೆ, ನಿಷ್ಪಕ್ಷಪಾತ ನಿಲುವು ಮತ್ತು ಸಾಮಾಜಿಕ ಕಳಕಳಿಯೇ ಪತ್ರಿಕೋದ್ಯಮದ ನಿಜವಾದ ಶಕ್ತಿ ಎಂದು ಅವರು ತಮ್ಮ ಸಂದೇಶಗಳಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿ, ಜನಸಾಮಾನ್ಯರ ಧ್ವನಿಯಾಗಿ, ಸತ್ಯದ ಕಾವಲುಗಾರರಾಗಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತಿರುವ ಸಮಸ್ತ ಪತ್ರಕರ್ತರು ಮತ್ತು ಮಾಧ್ಯಮ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನದ ಶುಭಾಶಯಗಳನ್ನು ಕೋರಿದ್ದಾರೆ.

ಸತ್ಯವನ್ನೇ ವರದಿ ಮಾಡುವ ನಿರ್ಭೀತ ಪತ್ರಿಕೋದ್ಯಮವು ಆರೋಗ್ಯಕರ ಸಮಾಜದ ನಿಜವಾದ ಶಕ್ತಿಯಾಗಿದೆ. ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮದ ಅಗತ್ಯವನ್ನು ರಾಷ್ಟ್ರೀಯ ಪತ್ರಿಕಾ ದಿನ ಸಾರುತ್ತದೆ. ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳು ವೇಗವಾಗಿ ಹರಡುತ್ತಿರುವ ಇಂದಿನ ಸಂದರ್ಭದಲ್ಲಿ, ಸತ್ಯಾಸತ್ಯತೆಯನ್ನು ಸಮಾಜದ ಮುಂದಿಡುವ ಪತ್ರಿಕಾರಂಗದ ಹೊಣೆಗಾರಿಕೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಶುಭಾಶಯ ತಿಳಿಸಿ, ಸತ್ಯದ ಪರವಾಗಿ ನಿಲ್ಲುವ ಧೈರ್ಯ, ಅನ್ಯಾಯವನ್ನು ಪ್ರಶ್ನಿಸುವ ಬದ್ಧತೆ ಮತ್ತು ಜನಸಾಮಾನ್ಯರ ಧ್ವನಿಯಾಗುವ ಸಾಮಾಜಿಕ ಕಳಕಳಿಯೇ ಪತ್ರಿಕೋದ್ಯಮದ ನಿಜವಾದ ಶಕ್ತಿ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತಾ, ನಿಷ್ಪಕ್ಷಪಾತ ವರದಿಗಾರಿಕೆ, ಸ್ವತಂತ್ರ ಅಭಿವ್ಯಕ್ತಿ ಮತ್ತು ಜನಪರ ಚಿಂತನೆಗಳ ಮೂಲಕ ಸಮಾಜವನ್ನು ಜಾಗೃತಗೊಳಿಸುತ್ತಿರುವ ಮಾಧ್ಯಮ ಮಿತ್ರರಿಗೆ ಶುಭಾಶಯ ಕೋರಿದ್ದಾರೆ. ಸ್ವತಂತ್ರ ಪತ್ರಿಕೋದ್ಯಮ ಸದೃಢವಾಗಿದ್ದಾಗ ಮಾತ್ರ ಪ್ರಜಾಪ್ರಭುತ್ವ ಜೀವಂತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರು ನಾಡಿನ ಸಮಸ್ತ ಮಾಧ್ಯಮ ಮಿತ್ರರು ಹಾಗೂ ಪತ್ರಕರ್ತ ಸ್ನೇಹಿತರಿಗೆ ರಾಷ್ಟ್ರೀಯ ಪತ್ರಿಕಾ ದಿನದ ಶುಭಾಶಯಗಳನ್ನು ಕೋರಿದ್ದಾರೆ.

ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಪತ್ರಕರ್ತರನ್ನು ಸಮಾಜದ ಕಣ್ಣು ಮತ್ತು ಕಿವಿ ಎಂದು ಬಣ್ಣಿಸಿದ್ದು, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ನಾಡಿನ ಅಭಿವೃದ್ಧಿಗೆ ಕೈಜೋಡಿಸಿರುವ ಪತ್ರಕರ್ತರ ಸೇವೆಯನ್ನು ಸ್ಮರಿಸಿದ್ದಾರೆ. ಸದೃಢ ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಆಡಳಿತ ವ್ಯವಸ್ಥೆಯನ್ನು ಸರಿದಾರಿಯಲ್ಲಿ ನಡೆಸುವ ನೈತಿಕ ಜವಾಬ್ದಾರಿ ಪತ್ರಿಕಾರಂಗದ ಮೇಲಿದೆ ಎಂದು ಹೇಳಿದ್ದಾರೆ.

ಯಾವುದೇ ಒತ್ತಡಗಳಿಗೆ ಮಣಿಯದೆ ಸತ್ಯದ ಪರವಾಗಿ ನಿಂತು, ನೈಜ ವರದಿಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಹಾಗೂ ಸಮಾನತೆ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ಪ್ರತಿಯೊಬ್ಬ ಪತ್ರಕರ್ತರಿಗೂ ಶುಭ ಹಾರೈಸಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ ಅವರು ಪತ್ರಿಕೋದ್ಯಮದ ಕೊಡುಗೆಯನ್ನು ಸ್ಮರಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಪತ್ರಿಕಾರಂಗದ ಪಾತ್ರ ಅಪಾರವಾಗಿದೆ ಎಂದಿದ್ದಾರೆ. ಸತ್ಯನಿಷ್ಠೆ, ನಿಷ್ಪಕ್ಷಪಾತ ನಿಲುವು ಮತ್ತು ಸಾಮಾಜಿಕ ಕಳಕಳಿ ಪತ್ರಿಕಾ ಧರ್ಮದ ಮೂಲಾಧಾರಗಳಾಗಿವೆ. ಸಮಾಜದ ನೈಜ ಚಿತ್ರಣವನ್ನು ಜನರ ಮುಂದಿಟ್ಟು ಜಾಗೃತಿ ಮೂಡಿಸುವ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುತ್ತಿರುವ ಪತ್ರಕರ್ತರಿಗೆ ಶುಭಾಶಯ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ರಿಕಾ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾಗಿದ್ದು, ಸಮಾಜದ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ. ತಮ್ಮೆಲ್ಲ ಪತ್ರಕರ್ತ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಮಾಜದ ಸಬಲೀಕರಣದ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಾ, ಸತ್ಯವನ್ನು ನಿರ್ಭೀತಿಯಿಂದ ಜನರ ಮುಂದಿಡುವ ಪತ್ರಕರ್ತರಿಗೆ ಶುಭಾಶಯ ಕೋರಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಪತ್ರಿಕೋದ್ಯಮವು ಸದಾ ಸತ್ಯ, ನಿಷ್ಠೆ ಮತ್ತು ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆಯಲಿ ಎಂದು ಆಶಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande