ಮೈಸೂರು ಬ್ಯಾಂಕ್ ವೃತ್ತದ ಬಳಿ ಐತಿಹಾಸಿಕ ಕಾನೂನು ಕಾಲೇಜು ಕಟ್ಟಡ ನೆಲಸಮ: ವಕೀಲರ ಸಂಘದಿಂದ ಖಂಡನೆ
ಬೆಂಗಳೂರು, 16 ನವೆಂಬರ್ (ಹಿ.ಸ.): ಮೈಸೂರ ಬ್ಯಾಂಕ್ ವೃತ್ತದ ಸಮೀಪವಿದ್ದ ಸುಮಾರು ಶತಮಾನದಷ್ಟು ಹಳೆಯ ವಸಾಹತುಶಾಹಿ ಕಾಲದ ಐತಿಹಾಸಿಕ ಪರಂಪರೆಯ ಕಟ್ಟಡವನ್ನು ನೆಲಸಮ ಮಾಡಿರುವುದನ್ನು ಐದು ವರ್ಷಗಳ ಕಾನೂನು ಪದವಿ ಕೋರ್ಸ್ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ. ಈ ಕಟ್ಟಡದಲ್ಲಿ ಈ ಹಿಂದೆ ಪ್ರತಿಷ್ಠಿತ ಸರ್ಕಾರ
ಮೈಸೂರು ಬ್ಯಾಂಕ್ ವೃತ್ತದ ಬಳಿ ಐತಿಹಾಸಿಕ ಕಾನೂನು ಕಾಲೇಜು ಕಟ್ಟಡ ನೆಲಸಮ: ವಕೀಲರ ಸಂಘದಿಂದ ಖಂಡನೆ


ಬೆಂಗಳೂರು, 16 ನವೆಂಬರ್ (ಹಿ.ಸ.):

ಮೈಸೂರ ಬ್ಯಾಂಕ್ ವೃತ್ತದ ಸಮೀಪವಿದ್ದ ಸುಮಾರು ಶತಮಾನದಷ್ಟು ಹಳೆಯ ವಸಾಹತುಶಾಹಿ ಕಾಲದ ಐತಿಹಾಸಿಕ ಪರಂಪರೆಯ ಕಟ್ಟಡವನ್ನು ನೆಲಸಮ ಮಾಡಿರುವುದನ್ನು ಐದು ವರ್ಷಗಳ ಕಾನೂನು ಪದವಿ ಕೋರ್ಸ್ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ.

ಈ ಕಟ್ಟಡದಲ್ಲಿ ಈ ಹಿಂದೆ ಪ್ರತಿಷ್ಠಿತ ಸರ್ಕಾರಿ ಕಾನೂನು ಕಾಲೇಜು (ನಂತರ ವಿಶ್ವವಿದ್ಯಾಲಯ ಕಾನೂನು ಕಾಲೇಜು) ಕಾರ್ಯನಿರ್ವಹಿಸುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ದಕ್ಷಿಣ ಪ್ರಾದೇಶಿಕ ಕೇಂದ್ರವೂ ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಐತಿಹಾಸಿಕ, ವಾಸ್ತುಶಿಲ್ಪ ಮತ್ತು ಕಾನೂನು ಶಿಕ್ಷಣದ ದೃಷ್ಟಿಯಿಂದ ಮಹತ್ವ ಹೊಂದಿದ್ದ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಿರುವುದು ಸಾಂಸ್ಕೃತಿಕ ಹಾಗೂ ಸಾಂಸ್ಥಿಕ ಪರಂಪರೆಯ ನಾಶವಾಗಿದೆ ಎಂದು ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಸಂಘದ ಅಧ್ಯಕ್ಷ ಎಸ್. ಉಮೇಶ್ ಅವರು ಈ ಕ್ರಮವನ್ನು ಕ್ಷಮಿಸಲಾಗದ ಸಾಂಸ್ಕೃತಿಕ ವಿಧ್ವಂಸಕ ಕೃತ್ಯ ಎಂದು ಟೀಕಿಸಿದ್ದಾರೆ. ಈ ಐತಿಹಾಸಿಕ ಕಟ್ಟಡವು ಹಲವು ತಲೆಮಾರುಗಳ ಕಾಲ ಕರ್ನಾಟಕದ ಕಾನೂನು ಶಿಕ್ಷಣದ ಪ್ರಮುಖ ಕೇಂದ್ರವಾಗಿತ್ತು. ದೇಶದ ಹಲವು ಗಣ್ಯ ನ್ಯಾಯಮೂರ್ತಿಗಳು, ರಾಜಕೀಯ ನಾಯಕರು ಹಾಗೂ ಉನ್ನತ ಆಡಳಿತಾಧಿಕಾರಿಗಳ ವೃತ್ತಿಜೀವನ ರೂಪಿಸುವಲ್ಲಿ ಈ ಸಂಸ್ಥೆ ಮಹತ್ವದ ಪಾತ್ರ ವಹಿಸಿತ್ತು ಎಂದು ತಿಳಿಸಿದ್ದಾರೆ.

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಮತ್ತು ಎಂ. ವೀರಪ್ಪ ಮೊಯ್ಲಿ, ರಾಜ್ಯದ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಎಚ್.ಎಂ. ರೇವಣ್ಣ ಹಾಗೂ ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರು ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ ಎಂದು ಸಂಘ ತಿಳಿಸಿದೆ.

ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ, ಕರ್ನಾಟಕ ಮತ್ತು ಭಾರತದ ಕಾನೂನು ಹಾಗೂ ರಾಜಕೀಯ ನಾಯಕತ್ವವನ್ನು ರೂಪಿಸಿದ ಕಟ್ಟಡವನ್ನು ನಾಶಪಡಿಸಿರುವುದು ಕಾನೂನು ವೃತ್ತಿಯವರಿಗೂ ಬೆಂಗಳೂರಿನ ನಾಗರಿಕರಿಗೂ ಮಾಡಿದ ದೊಡ್ಡ ಅವಮಾನವಾಗಿದೆ. ಐತಿಹಾಸಿಕ ಕಟ್ಟಡಗಳನ್ನು ಸಂರಕ್ಷಿಸಿ ಗೌರವಿಸಬೇಕೇ ಹೊರತು ಅವುಗಳನ್ನು ಧ್ವಂಸಗೊಳಿಸಬಾರದು ಎಂದು ಉಮೇಶ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಸಂಘ ಒತ್ತಾಯಿಸಿದೆ. ನೆಲಸಮಗೊಳಿಸಿರುವ ಕಟ್ಟಡವನ್ನು ಅದೇ ಸ್ಥಳದಲ್ಲಿ ಮೂಲ ವಾಸ್ತುಶಿಲ್ಪದ ವಿನ್ಯಾಸ ಮತ್ತು ಐತಿಹಾಸಿಕ ಸ್ವರೂಪಕ್ಕೆ ಅನುಗುಣವಾಗಿ ಮರುನಿರ್ಮಿಸಬೇಕು. ಅಲ್ಲದೆ, ಕಟ್ಟಡ ನೆಲಸಮಕ್ಕೆ ಅನುಮತಿ ನೀಡಿದ ಮತ್ತು ಕಾರ್ಯಾಚರಣೆ ನಡೆಸಿದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ, ಶಿಸ್ತು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande