ಪರಂಪರೆ ಉಳಿಸಿಕೊಂಡೇ ಕುಮಾರಕೃಪಕ್ಕೆ ಮರು ವಿನ್ಯಾಸ: ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು, 16 ನವೆಂಬರ್ (ಹಿ.ಸ.): ಕುಮಾರಕೃಪ ಸರ್ಕಾರಿ ಅತಿಥಿಗೃಹವನ್ನು ‘ಗಂಗಾ’ ಎಂದು ಮರುನಾಮಕರಣ ಮಾಡಿ ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ. ಕಟ್ಟಡದ ಮೂಲ ಪರಂಪರೆಯನ್ನು ಉಳಿಸಿಕೊಂಡೇ ಶೇ.10ರಷ್ಟು ಮರುವಿನ್ಯಾಸ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಸೋಮವಾರ ಮ
ಸಿಎಂ ಡಿ ಕೆ ಶಿವಕುಮಾರ್ ಅವರು ಕುಮಾರಪಾರ್ಕ್ ನ ಅಧಿಕೃತ ನಿವಾಸ 'ಗಂಗಾ' ದಲ್ಲಿ ಪತ್ನಿ ಉಷಾ ಅವರ ಜತೆ ಸೋಮವಾರ ಪೂಜೆ ನೆರವೇರಿಸಿದರು.


ಬೆಂಗಳೂರು, 16 ನವೆಂಬರ್ (ಹಿ.ಸ.):

ಕುಮಾರಕೃಪ ಸರ್ಕಾರಿ ಅತಿಥಿಗೃಹವನ್ನು ‘ಗಂಗಾ’ ಎಂದು ಮರುನಾಮಕರಣ ಮಾಡಿ ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ. ಕಟ್ಟಡದ ಮೂಲ ಪರಂಪರೆಯನ್ನು ಉಳಿಸಿಕೊಂಡೇ ಶೇ.10ರಷ್ಟು ಮರುವಿನ್ಯಾಸ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಸೋಮವಾರ ಮುಖ್ಯಮಂತ್ರಿ ಸರಕಾರಿ ಅಧಿಕೃತ ನಿವಾಸ ಗಂಗಾ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಈ ಹಿಂದೆ ಹೊಂದಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು. ಕುಮಾರಕೃಪ ಅತಿಥಿಗೃಹ ಬಳಕೆಯಾಗದೆ ಉಳಿದಿದ್ದರಿಂದ ಅದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸುವ ನಿರ್ಧಾರ ಕೈಗೊಳ್ಳಲಾಯಿತು. ಇಂದು ಇಲ್ಲಿ ಖಾಸಗಿ ಪೂಜೆ ನೆರವೇರಿಸಿದ್ದೇನೆ. ಗುರುವಾರ ರಾಜ್ಯದ 224 ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರನ್ನು ಆಹ್ವಾನಿಸಲಾಗಿದೆ. ನಂತರ ಈ ನಿವಾಸದಲ್ಲಿ ಎಲ್ಲರನ್ನೂ ಭೇಟಿಯಾಗಲಿದ್ದೇನೆ ಎಂದರು.

ಕಡಿಮೆ ವೆಚ್ಚದ ಗ್ರಾನೈಟ್, ಶೇ.90ರಷ್ಟು ಖಾಸಗಿ ಪೀಠೋಪಕರಣ

ನಿವಾಸದ ನವೀಕರಣಕ್ಕೆ ಮಾಡಿರುವ ವೆಚ್ಚದ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವರು ಖರ್ಚಿನ ಬಗ್ಗೆ ಪ್ರಶ್ನಿಸಬಹುದು. ಆದರೆ ಹೆಚ್ಚಿನ ವೆಚ್ಚ ಭದ್ರತಾ ವ್ಯವಸ್ಥೆ ಮತ್ತು ರಸ್ತೆ ಸೌಕರ್ಯ ಕಲ್ಪಿಸಲು ಆಗಿದೆ. ಉಳಿದಂತೆ ಶೇ.90ರಷ್ಟು ಪೀಠೋಪಕರಣಗಳು ನನ್ನ ಖಾಸಗಿ ಬಳಕೆಯವು. ಪ್ರತಿ ಚದರ ಅಡಿಗೆ 60ರಿಂದ 80 ರೂ. ಮೌಲ್ಯದ ಕಡಿಮೆ ವೆಚ್ಚದ ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದೆ ಎಂದು ತಿಳಿಸಿದರು.

ವೆಚ್ಚದ ಕುರಿತು ಟೀಕೆಗಳು ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ತಮ್ಮ ಮನೆಯಲ್ಲಿದ್ದ ಹಾಗೂ ಕುಮಾರಕೃಪದಲ್ಲಿದ್ದ ಹಳೆಯ ಪೀಠೋಪಕರಣಗಳನ್ನೇ ಬಳಸಿಕೊಳ್ಳಲಾಗಿದೆ. ಈ ಕುರಿತು ಕೆಲವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಯನ್ನೂ ಸಲ್ಲಿಸಿದ್ದಾರೆ ಎಂದರು.

ಪಾರಂಪರಿಕ ಕಟ್ಟಡದ ಸ್ವರೂಪ ಬದಲಿಸಲಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರು ಟೀಕೆ ಮಾಡುವುದೇ ಅವರ ಕರ್ತವ್ಯ. ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಬಂದು ಪರಿಶೀಲಿಸಲಿ ಎಂದು ಹೇಳಿದರು.

ಸಾರ್ವಜನಿಕರ ಭೇಟಿಗೆ ಪಕ್ಕದ ಕೃಷ್ಣಾದಲ್ಲಿ ಪ್ರತ್ಯೇಕ ವ್ಯವಸ್ಥೆ

ಗಂಗಾ ನಿವಾಸದಲ್ಲಿ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರು ಮತ್ತು ಅಧಿಕಾರಿಗಳ ಭೇಟಿ ಹಾಗೂ ಚರ್ಚೆಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರ ಭೇಟಿಗಾಗಿ ಪಕ್ಕದ ಕೃಷ್ಣಾ ನಿವಾಸದಲ್ಲಿ ಪ್ರತ್ಯೇಕ ಸಭಾಂಗಣ ನಿರ್ಮಿಸಲಾಗುತ್ತಿದೆ. ಇದಕ್ಕೆ ಇನ್ನೂ ಒಂದೆರಡು ತಿಂಗಳು ಕಾಲಾವಕಾಶ ಬೇಕಾಗಬಹುದು ಎಂದು ತಿಳಿಸಿದರು.

ಯಾರೂ ಈ ನಿವಾಸದಲ್ಲಿ ಶಾಶ್ವತವಾಗಿ ಇರುವುದಿಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೆ ಅನುಕೂಲವಾಗಲಿ ಹಾಗೂ ಬಳಕೆಯಾಗದೆ ವ್ಯರ್ಥವಾಗುತ್ತಿದ್ದ ಅತಿಥಿಗೃಹದ ಜಾಗವನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande