ರಾಜ್ಯದಲ್ಲಿ 100 ಗ್ರೀನ್ ಎಸ್ಎಂ ಟ್ಯಾಕ್ಸಿಗಳಿಗೆ ಮಾತ್ರ ಅನುಮತಿ: ಭೈರತಿ ಸುರೇಶ್
ಬೆಂಗಳೂರು, 16 ನವೆಂಬರ್ (ಹಿ.ಸ.): ರಾಜ್ಯದಲ್ಲಿ ವಿಯೆಟ್ನಾಂ ಮೂಲದ ವಿನ್ಗ್ರೂಪ್ ಕಂಪನಿಯ ‘ಗ್ರೀನ್ ಎಸ್ಎಂ’ ಎಲೆಕ್ಟ್ರಿಕ್ ಟ್ಯಾಕ್ಸಿಗಳ ನೋಂದಣಿಗೆ ಸಾರಿಗೆ ಇಲಾಖೆ ಕಡಿವಾಣ ಹಾಕಿದೆ. ಈಗಾಗಲೇ 100 ಟ್ಯಾಕ್ಸಿಗಳಿಗೆ ಮಾತ್ರ ನೋಂದಣಿ ಅನುಮತಿ ನೀಡಲಾಗಿದ್ದು, ಇನ್ನು ಮುಂದೆ ಹೊಸದಾಗಿ ನೋಂದಣಿ ಮಾಡದಂತೆ ಸಾ
Karnataka-Allows-Only-100-Green-SM-Taxis-Bhairathi-Suresh


ಬೆಂಗಳೂರು, 16 ನವೆಂಬರ್ (ಹಿ.ಸ.):

ರಾಜ್ಯದಲ್ಲಿ ವಿಯೆಟ್ನಾಂ ಮೂಲದ ವಿನ್ಗ್ರೂಪ್ ಕಂಪನಿಯ ‘ಗ್ರೀನ್ ಎಸ್ಎಂ’ ಎಲೆಕ್ಟ್ರಿಕ್ ಟ್ಯಾಕ್ಸಿಗಳ ನೋಂದಣಿಗೆ ಸಾರಿಗೆ ಇಲಾಖೆ ಕಡಿವಾಣ ಹಾಕಿದೆ.

ಈಗಾಗಲೇ 100 ಟ್ಯಾಕ್ಸಿಗಳಿಗೆ ಮಾತ್ರ ನೋಂದಣಿ ಅನುಮತಿ ನೀಡಲಾಗಿದ್ದು, ಇನ್ನು ಮುಂದೆ ಹೊಸದಾಗಿ ನೋಂದಣಿ ಮಾಡದಂತೆ ಸಾರಿಗೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಗ್ರೀನ್ ಎಸ್ಎಂ ಟ್ಯಾಕ್ಸಿಗಳಿಗೂ ಆಟೋಗಳ ಮಾದರಿಯಲ್ಲಿ ಮೀಟರ್ ಅಳವಡಿಕೆ ಕಡ್ಡಾಯವಾಗಬೇಕು.

ಮೀಟರ್ ವ್ಯವಸ್ಥೆ ಜಾರಿಗೊಳಿಸಿದರೆ ಮಾತ್ರ ಮುಂದಿನ ಅನುಮತಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಗ್ರೀನ್ ಎಸ್ಎಂ ಕಂಪನಿಯ ಎಲೆಕ್ಟ್ರಿಕ್ ಕಾರುಗಳ ಮೂಲಕ ಕ್ಯಾಬ್ ಸೇವೆ ಆರಂಭಿಸುವ ಪ್ರಸ್ತಾಪಕ್ಕೆ ಕರ್ನಾಟಕದ ಖಾಸಗಿ ಸಾರಿಗೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಕಂಪನಿಯ ಕಡಿಮೆ ದರದ ಸೇವೆಯಿಂದ ಸ್ಥಳೀಯ ಕ್ಯಾಬ್ ಮತ್ತು ಆಟೋ ಚಾಲಕರ ಜೀವನೋಪಾಯಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕಂಪನಿಯ ಸೇವೆಯ ಕುರಿತು ಹಲವು ಆಕ್ಷೇಪಗಳನ್ನು ಸಲ್ಲಿಸಿದ್ದವು.

ಇತ್ತೀಚೆಗಷ್ಟೇ ಕರ್ನಾಟಕ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ ನಿಯಮಗಳು-2016ರ ಅಡಿಯಲ್ಲಿ ಗ್ರೀನ್ ಎಸ್ಎಂ ಕಂಪನಿಯು 2031ರ ಸೆಪ್ಟೆಂಬರ್ವರೆಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಸಾರಿಗೆ ಇಲಾಖೆಯಿಂದ ಅಗ್ರಿಗೇಟರ್ ಪರವಾನಗಿ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಖಾಸಗಿ ಸಾರಿಗೆ ಸಂಘಟನೆಗಳ ವಿರೋಧ ತೀವ್ರಗೊಂಡಿತ್ತು.

ಕಿಲೋಮೀಟರ್ಗೆ 8 ರೂ. ದರದ ಸೇವೆ

ಗ್ರೀನ್ ಎಸ್ಎಂ ಕಂಪನಿಯು 2026ರ ಜೂನ್ನಲ್ಲಿ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ತನ್ನ ಲಿಮೋ ಸೇವೆಯ ಮೂಲಕ ಭಾರತದಲ್ಲಿ ಕಾರ್ಯಾರಂಭಿಸಿತ್ತು. ಬಳಿಕ ಹೈದರಾಬಾದ್ ಸೇರಿದಂತೆ ಇತರ ನಗರಗಳಿಗೂ ಸೇವೆಯನ್ನು ವಿಸ್ತರಿಸಿದೆ.

ಏಳು ಆಸನಗಳ ಸಾಮರ್ಥ್ಯ ಹೊಂದಿರುವ ವಿನ್ಫಾಸ್ಟ್ ಲಿಮೋ ಗ್ರೀನ್ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿರುವ ಕಂಪನಿ, ಪ್ರತಿ ಕಿಲೋಮೀಟರ್ಗೆ ಸುಮಾರು 8 ರೂ. ದರದಲ್ಲಿ ಪ್ರಯಾಣ ಸೇವೆ ಒದಗಿಸುತ್ತಿದೆ.

ತರಬೇತಿ ಪಡೆದ ಚಾಲಕರು, ವಾಹನದ ಒಳ ಮತ್ತು ಹೊರಭಾಗದಲ್ಲಿ ಕ್ಯಾಮೆರಾಗಳು, ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಹಾಗೂ ತುರ್ತು ಸಹಾಯ ಬಟನ್ ಸೇರಿದಂತೆ ಹಲವು ಸುರಕ್ಷತಾ ಸೌಲಭ್ಯಗಳನ್ನು ಒದಗಿಸುವುದಾಗಿ ಕಂಪನಿ ಹೇಳಿಕೊಂಡಿದೆ. ಇದೀಗ ಬೆಂಗಳೂರಿನಲ್ಲಿಯೂ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande