ರಾಮನಗರ ನಮ್ಮ ರಾಜಕೀಯ ಜನ್ಮಭೂಮಿ, ನಮ್ಮನ್ನು ಹೊರಹಾಕಲು ಯಾರಿಂದಲೂ ಸಾಧ್ಯವಿಲ್ಲ: ಎಚ್.ಡಿ. ಕುಮಾರಸ್ವಾಮಿ
ಕೊಲ್ಲೂರು, 16 ನವೆಂಬರ್ (ಹಿ.ಸ.): ನಿಖಿಲ್ ಕುಮಾರಸ್ವಾಮಿ ಮೂರು ಬಾರಿ ಚುನಾವಣೆಯಲ್ಲಿ ಸೋತಿರಬಹುದು. ಆದರೆ ರಾಮನಗರ ನಮ್ಮ ರಾಜಕೀಯ ಜನ್ಮಭೂಮಿಯಾಗಿದ್ದು, ಇಲ್ಲಿಂದ ನಮ್ಮನ್ನು ಯಾರಿಂದಲೂ ಹೊರಹಾಕಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತ
HD-Kumaraswamy-Nikhil-Ramanagara-Ganga-Controversy-Karnataka-Politics


ಕೊಲ್ಲೂರು, 16 ನವೆಂಬರ್ (ಹಿ.ಸ.):

ನಿಖಿಲ್ ಕುಮಾರಸ್ವಾಮಿ ಮೂರು ಬಾರಿ ಚುನಾವಣೆಯಲ್ಲಿ ಸೋತಿರಬಹುದು. ಆದರೆ ರಾಮನಗರ ನಮ್ಮ ರಾಜಕೀಯ ಜನ್ಮಭೂಮಿಯಾಗಿದ್ದು, ಇಲ್ಲಿಂದ ನಮ್ಮನ್ನು ಯಾರಿಂದಲೂ ಹೊರಹಾಕಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಸೋಮವಾರ ಕೊಲ್ಲೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಅವರ ಚುನಾವಣಾ ಸೋಲುಗಳ ಕುರಿತು ಪ್ರತಿಕ್ರಿಯಿಸಿ, ನಿಖಿಲ್ ಈಗಾಗಲೇ ರಾಜ್ಯದ 70 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದಾರೆ. ಆರೋಗ್ಯ ಹದಗೆಟ್ಟಿದ್ದರೂ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಅವರು ಭೇಟಿ ನೀಡಿದ ಕಡೆಗಳಲ್ಲೆಲ್ಲ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಮನಗರದೊಂದಿಗಿನ ತಮ್ಮ ರಾಜಕೀಯ ಸಂಬಂಧವನ್ನು ಸ್ಮರಿಸಿದ ಅವರು, ರಾಮನಗರ ನನಗೆ ರಾಜಕೀಯವಾಗಿ ಜನ್ಮ ನೀಡಿದ ಭೂಮಿ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆಯಿಂದ ಹೊರಬರಲು ಹೆದರುತ್ತಿದ್ದರು ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ನಾನು ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ. ನಮ್ಮನ್ನು ರಾಮನಗರದಿಂದ ಹೊರಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿರಿಯೂರು ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಲು ಮನವಿ

ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂಬುದು ಆ ಪಕ್ಷದ ನಾಯಕರ ಆಸೆಯಾಗಿರಬಹುದು. ಆದರೆ ಈ ಕ್ಷೇತ್ರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯುತ್ತಾ ಬಂದಿದೆ. ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸುಮಾರು 40 ಸಾವಿರ ಮತಗಳಿದ್ದು, ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ನಾಯಕರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಈ ವಿಚಾರದಲ್ಲಿ ಯಾವುದೇ ವೈಯಕ್ತಿಕ ಪ್ರತಿಷ್ಠೆ ಅಥವಾ ಗೊಂದಲವಿಲ್ಲ. ನಾವು ತಾಳ್ಮೆಯಿಂದ ಇದ್ದೇವೆ. ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಿದರೆ ಪಕ್ಷದ ಮತಗಳು ಗೆಲುವಿಗೆ ನೆರವಾಗಲಿವೆ ಎಂಬುದನ್ನು ಬಿಜೆಪಿ ನಾಯಕರಿಗೆ ವಿವರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮತ್ತೆ ಮುಖ್ಯಮಂತ್ರಿಯಾಗುವ ಆಸೆಯಿಲ್ಲ

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ ಕುಮಾರಸ್ವಾಮಿ, ಸರ್ಕಾರ ಮೂರೂವರೆ ವರ್ಷ ಪೂರೈಸಿದ್ದರೂ ತನ್ನ ಸಾಧನೆಗಳನ್ನು ಹೇಳಿಕೊಳ್ಳಲು ಯಾವುದೇ ಮಹತ್ವದ ವಿಚಾರಗಳಿಲ್ಲ ಎಂದು ಆರೋಪಿಸಿದರು.

ಐದು ಗ್ಯಾರಂಟಿಗಳನ್ನು ನೀಡಿರುವ ಸರ್ಕಾರ ಅವುಗಳ ಆರ್ಥಿಕ ಹೊರೆಯನ್ನು ಜನರ ಮೇಲೆಯೇ ಹಾಕುತ್ತಿದೆ. ಜನರ ದುಡಿಮೆಯ ತೆರಿಗೆ ಹಣದಿಂದ ಸರ್ಕಾರದ ಖಜಾನೆ ತುಂಬುತ್ತಿದೆ. ಇದರಲ್ಲಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಗಳ ವೈಯಕ್ತಿಕ ಕೊಡುಗೆ ಏನೂ ಇಲ್ಲ ಎಂದು ಟೀಕಿಸಿದರು.

ನನಗೆ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿಲ್ಲ. ಕೇವಲ 38 ಸ್ಥಾನಗಳನ್ನು ಹೊಂದಿದ್ದರೂ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ ಎಂದು ತಮ್ಮ ರಾಜಕೀಯ ಅನುಭವವನ್ನು ಉಲ್ಲೇಖಿಸಿದರು.

ಗಂಗಾ ಎಂದು ಹೆಸರಿಟ್ಟು ಅಪವಿತ್ರ ಕೆಲಸ ಮಾಡಬಾರದು

ಕೆಂಗಲ್ ಹನುಮಂತಯ್ಯ ನಿರ್ಮಿಸಿದ್ದ ಕುಮಾರಕೃಪಾ ಕಟ್ಟಡಕ್ಕೆ 'ಗಂಗಾ' ಎಂದು ಹೆಸರಿಟ್ಟಿರುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ಪವಿತ್ರ ನದಿಯ ಹೆಸರನ್ನಿಟ್ಟುಕೊಂಡು ಅಪವಿತ್ರ ಕೆಲಸಗಳನ್ನು ಮಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಕಟ್ಟಡವನ್ನು ಏಳು ಸುತ್ತಿನ ಕೋಟೆಯಂತೆ ನಿರ್ಮಿಸಲಾಗಿದೆ. ಅಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಇದಕ್ಕಾಗಿ ಎಷ್ಟು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೋ ಗೊತ್ತಿಲ್ಲ. ಗಂಗಾ, ಕಾವೇರಿ ಅಥವಾ ಕೊತ್ವಾಲ್ ಎಂದು ಬೇಕಾದರೂ ಹೆಸರಿಟ್ಟುಕೊಳ್ಳಲಿ. ಹೆಸರಿನಿಂದ ಯಾವುದೇ ಪ್ರಯೋಜನವಿಲ್ಲ. ಪವಿತ್ರ ಹೆಸರಿಟ್ಟುಕೊಂಡ ಮಾತ್ರಕ್ಕೆ ಅಲ್ಲಿನ ಕೆಲಸಗಳೂ ಪವಿತ್ರವಾಗಿರಬೇಕಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸದ ಸರ್ಕಾರ

ಕಬ್ಬು ಬೆಳೆಗಾರರು ಹೋರಾಟ ನಡೆಸಿದರೂ ರಾಜ್ಯ ಸರ್ಕಾರ ಅವರ ನೆರವಿಗೆ ಧಾವಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮರ್ಪಕ ನೀರು ಹಂಚಿಕೆಯಾಗದ ಪರಿಣಾಮ ಕಬ್ಬಿನ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande