ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಬಿಎ ನೌಕರರಿಂದ ಸಾಮೂಹಿಕ ರಜೆ ಎಚ್ಚರಿಕೆ
ಬೆಂಗಳೂರು, 16 ನವೆಂಬರ್ (ಹಿ.ಸ.): ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ. ನೌಕರರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೆ ತರುವುದು ಸೇರಿದಂತೆ ಸಿಬ್ಬಂದಿಗೆ ಆಗುತ್ತಿರುವ
GBA-employees-mass-leave-protest-demands-staff-recruitment-and-action-against-harassment


ಬೆಂಗಳೂರು, 16 ನವೆಂಬರ್ (ಹಿ.ಸ.):

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ.

ನೌಕರರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೆ ತರುವುದು ಸೇರಿದಂತೆ ಸಿಬ್ಬಂದಿಗೆ ಆಗುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು ಎಂದು ರಾಜ್ಯ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಜಿಬಿಎಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೆ ತರುವಂತೆ ಮನವಿ ಮಾಡುತ್ತಾ ಬಂದಿದ್ದೇವೆ. ಆದರೆ, ಈವರೆಗೆ ನಮ್ಮ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ. ಹೀಗಾಗಿ ಸಾಮೂಹಿಕ ರಜೆ ಹಾಕುವ ಮೂಲಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದರು.

ಜಿಬಿಎ ತಾಂತ್ರಿಕ ವಿಭಾಗದಲ್ಲಿ ಯಾವುದೇ ಪೂರ್ವಸೂಚನೆ ಅಥವಾ ಸೂಕ್ತ ತರಬೇತಿ ನೀಡದೆ ರಾತ್ರೋರಾತ್ರಿ ತಂತ್ರಾಂಶವನ್ನು ಬದಲಾವಣೆ ಮಾಡಲಾಗುತ್ತಿದೆ. ಕೈಬರಹದ ಆದೇಶ ನೀಡಿ ಸಾಫ್ಟ್ವೇರ್ ಬದಲಾಯಿಸುವುದು ಎಷ್ಟು ಸಮಂಜಸ? ಹೊಸ ತಂತ್ರಾಂಶದ ಕುರಿತು ತರಬೇತಿಯೇ ಇಲ್ಲದೆ ಸಿಬ್ಬಂದಿ ಕೆಲಸ ನಿರ್ವಹಿಸುವುದು ಹೇಗೆ? ಇಂತಹ ಸಂದರ್ಭದಲ್ಲಿ ಕೆಲಸ ಮಾಡುವಾಗ ಸಣ್ಣಪುಟ್ಟ ತಪ್ಪುಗಳಾದರೂ ಸಿಬ್ಬಂದಿಯನ್ನು ಏಕಾಏಕಿ ಅಮಾನತುಗೊಳಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಬಿಎ ಕಂದಾಯ ಇಲಾಖೆ ವಿಶೇಷ ಆಯುಕ್ತ ಮನೀಶ್ ಮೊದ್ಗಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಒಬ್ಬ ವಿಶೇಷ ಆಯುಕ್ತರ ಅಡಿಯಲ್ಲಿ ಹತ್ತಾರು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ, ಅವರ ಮೂಲಕ ಕ್ರಮ ಕೈಗೊಳ್ಳುವ ಬದಲು ವಿಶೇಷ ಆಯುಕ್ತರೇ ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ಸಿಬ್ಬಂದಿ ವಿರುದ್ಧ ದೂರು ನೀಡುತ್ತಿರುವುದು ಸರಿಯಲ್ಲ. ಸಿಬ್ಬಂದಿಯೊಂದಿಗೆ ವೈಯಕ್ತಿಕ ದ್ವೇಷ ಸಾಧಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಮನೀಶ್ ಮೊದ್ಗಲ್ ಅವರೇ ಹೇಳಿಕೊಂಡಿರುವಂತೆ ತಮ್ಮ ಸೇವಾವಧಿಯಲ್ಲಿ ಯಾವುದೇ ಇಲಾಖೆಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸಿಲ್ಲ. ಆದರೆ, ಜಿಬಿಎ ಕಂದಾಯ ಇಲಾಖೆಯ ಸಿಬ್ಬಂದಿ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರೆ.

ಹೀಗಿದ್ದರೂ ಅವರು ಬಂದ ನಂತರ ಸಿಬ್ಬಂದಿಗೆ ಕಿರುಕುಳ ಹೆಚ್ಚಾಗಿದೆ. ಸಣ್ಣಪುಟ್ಟ ತಪ್ಪುಗಳಿಗೂ ಅಮಾನತು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸಿಬ್ಬಂದಿಗೆ ಆಗುತ್ತಿರುವ ಕಿರುಕುಳದಿಂದಾಗಿ ಈವರೆಗೆ 15ರಿಂದ 20 ಮಂದಿ ಮೃತಪಟ್ಟಿದ್ದಾರೆ ಎಂದು ಅಮೃತ್ ರಾಜ್ ಗಂಭೀರ ಆರೋಪ ಮಾಡಿದರು.

ಜಿಬಿಎಯಲ್ಲಿ ಪ್ರಸ್ತುತ ಸುಮಾರು ನಾಲ್ಕು ಸಾವಿರ ಸಿಬ್ಬಂದಿ ಕೊರತೆಯಿದೆ. ದೊಡ್ಡ ಹುದ್ದೆಗಳ ಅಧಿಕಾರಿಗಳ ನೇಮಕಾತಿಗಿಂತ ಅಗತ್ಯವಿರುವ ಕೆಳಹಂತದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಮುಖ್ಯ. ಇದರಿಂದ ಜಿಬಿಎಗೆ ಆರ್ಥಿಕ ಹೊರೆಯೂ ಕಡಿಮೆಯಾಗಲಿದೆ.

ಇಲ್ಲಿ ಮೇಸ್ತ್ರಿಗಳಿಗಿಂತ ಕೂಲಿ ಕೆಲಸ ಮಾಡುವ ಸಿಬ್ಬಂದಿಯ ಅಗತ್ಯ ಹೆಚ್ಚಿದೆ. ಕೊರತೆಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡರೆ ಬೆಂಗಳೂರಿನ ಜನರಿಗೆ ಉತ್ತಮ ಸೇವೆ ನೀಡಲು ಹಾಗೂ ನಗರದ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಒತ್ತಾಯಿಸಿದರು.

ಸಿಬ್ಬಂದಿ ಕೊರತೆ ನೀಗಿಸಿ, ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೆ ತಂದು ನೌಕರರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಅಮೃತ್ ರಾಜ್ ಸ್ಪಷ್ಟಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande