ವಿಜಯಪುರದ ಗಾಯನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ‘ರೈಸಿಂಗ್ ಸ್ಟಾರ್ಸ್ ಆಫ್ ವಿಜಯಪುರ’ ಗಾಯನ ಸ್ಪರ್ಧೆ
ವಿಜಯಪುರ, 16 ನವೆಂಬರ್ (ಹಿ.ಸ.) ವಿಜಯಪುರ ಜಿಲ್ಲೆಯ ಸಂಗೀತಾಸಕ್ತರು ಹಾಗೂ ಉದಯೋನ್ಮುಖ ಗಾಯನ ಪ್ರತಿಭೆಗಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಮತ್ತು ಸಂಗೀತ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ಬಿಜಾಪುರ ಮ್ಯೂಸಿಕಲ್ ಆರ್ಟಿಸ್ಟ್ಸ್ ಅಸೋಸಿಯೇಷನ್ (ರಿ.) ವತಿಯಿಂದ ‘ರೈಸಿಂಗ್ ಸ್ಟಾರ್ಸ್ ಆಫ್
ಸಂಗೀತ ಸ್ಪರ್ಧೆ


ವಿಜಯಪುರ, 16 ನವೆಂಬರ್ (ಹಿ.ಸ.)

ವಿಜಯಪುರ ಜಿಲ್ಲೆಯ ಸಂಗೀತಾಸಕ್ತರು ಹಾಗೂ ಉದಯೋನ್ಮುಖ ಗಾಯನ ಪ್ರತಿಭೆಗಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಮತ್ತು ಸಂಗೀತ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ಬಿಜಾಪುರ ಮ್ಯೂಸಿಕಲ್ ಆರ್ಟಿಸ್ಟ್ಸ್ ಅಸೋಸಿಯೇಷನ್ (ರಿ.) ವತಿಯಿಂದ ‘ರೈಸಿಂಗ್ ಸ್ಟಾರ್ಸ್ ಆಫ್ ವಿಜಯಪುರ’ ಹೆಸರಿನಲ್ಲಿ ಬೃಹತ್ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಮನೋಹರ ಐನಾಪುರ ಅವರು ಸ್ಪರ್ಧೆಯ ವಿವರಗಳನ್ನು ಪ್ರಕಟಿಸಿದರು.

2018ರಲ್ಲಿ ಸ್ಥಾಪನೆಯಾದ ಸಂಸ್ಥೆಯು ವಿಜಯಪುರ ಜಿಲ್ಲೆಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ವರ್ಷವೂ ವಿಶೇಷವಾಗಿ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಫಯಾಜ ಕಲಾದಗಿ ಮಾತನಾಡಿ, ವಿಜಯಪುರ ಜಿಲ್ಲೆ ಹಾಗೂ ನಗರದಲ್ಲಿ ಸಂಗೀತ ಕ್ಷೇತ್ರದಲ್ಲಿ ಹಲವು ಸಾಧಕರಿದ್ದಾರೆ. ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಪ್ರಕಾಶ್ ಮಠ ಮಾತನಾಡಿ, ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಅರ್ಹ ಪ್ರತಿಭೆಗಳೆಲ್ಲರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಎರಡು ವಿಭಾಗಗಳಲ್ಲಿ ಸ್ಪರ್ಧೆ

ಸ್ಪರ್ಧೆಯನ್ನು ಜೂನಿಯರ್ಸ್ ಮತ್ತು ಸೀನಿಯರ್ಸ್ ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. 6ರಿಂದ 15 ವರ್ಷ ವಯೋಮಾನದ ಮಕ್ಕಳು ಜೂನಿಯರ್ಸ್ ವಿಭಾಗದಲ್ಲಿ ಹಾಗೂ 16 ವರ್ಷ ಮತ್ತು ಮೇಲ್ಪಟ್ಟವರು ಸೀನಿಯರ್ಸ್ ವಿಭಾಗದಲ್ಲಿ ಭಾಗವಹಿಸಬಹುದು. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.

ನಾಲ್ಕು ಹಂತಗಳಲ್ಲಿ ಸ್ಪರ್ಧೆ

* ಆಡಿಷನ್ ಸುತ್ತು: ನವೆಂಬರ್ 22ರಂದು ಬೆಳಿಗ್ಗೆ 10 ಗಂಟೆಯಿಂದ.

* ಪ್ರಥಮ ಸುತ್ತು: ಡಿಸೆಂಬರ್ 6ರಂದು ಬೆಳಿಗ್ಗೆ 10 ಗಂಟೆಯಿಂದ.

* ದ್ವಿತೀಯ ಸುತ್ತು: ಡಿಸೆಂಬರ್ 12ರಂದು ಬೆಳಿಗ್ಗೆ 10 ಗಂಟೆಯಿಂದ.

* ಅಂತಿಮ ಸುತ್ತು: ಡಿಸೆಂಬರ್ 20ರಂದು ಬೆಳಿಗ್ಗೆ 10 ಗಂಟೆಯಿಂದ.

ಆಡಿಷನ್, ಪ್ರಥಮ ಹಾಗೂ ದ್ವಿತೀಯ ಸುತ್ತುಗಳು ಸ್ಯಾಟಲೈಟ್ ಬಸ್ ನಿಲ್ದಾಣದ ಸಮೀಪದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯಲಿವೆ. ಅಂತಿಮ ಸುತ್ತು ನಗರದ ಸ್ಟೇಷನ್ ರಸ್ತೆಯ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜರುಗಲಿದೆ.

ಸ್ಪರ್ಧೆಯ ಎರಡೂ ವಿಭಾಗಗಳಲ್ಲಿ ವಿಜೇತರಾಗುವ ಪ್ರತಿಭಾವಂತರಿಗೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ನವೆಂಬರ್ 20 ನೋಂದಣಿಗೆ ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಪ್ರಕಾಶ್ ಮಠ (9844345123) ಅಥವಾ ಚಂದ್ರಕಾಂತ್ ಜಾಧವ್ (7019682003) ಅವರನ್ನು ಸಂಪರ್ಕಿಸಬಹುದು.

ಜಿಲ್ಲೆಯ ಗಾಯನ ಪ್ರತಿಭೆಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಂಗೀತಾಸಕ್ತರು, ಪಾಲಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವೀರೇಶ ವಾಲಿ, ರಫೀಕ್ ಶ್ಯಾರಪ್ಯಾದೆ, ಅಲ್ತಾಪ್ ಆಲಮೇಲ ಸೇರಿದಂತೆ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande